ಪುತ್ತೂರು: ಸಂಘಟನೆಗಿಂತ ನಾನೇ ಮಿಗಿಲು ಎಂದ ಸಾಕಷ್ಟು ನಾಯಕರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಕಂಡಿದ್ದು, ಇದರಲ್ಲಿ ಪುತ್ತೂರಿನ ಪಕ್ಷೇತರ ಅಭ್ಯರ್ಥಿಯೂ ಸೇರಿಕೊಳ್ಳುತ್ತಾರೆ ಎಂದು ಭಜರಂಗ ದಳ ದಕ್ಷಿಣ ಪ್ರಾಂತ ಸಹ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಹೇಳಿದರು.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಕ್ತಿ ನಿರ್ಮಾಣ ಕಾರ್ಯವನ್ನು ಸಂಘ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಆದರೆ ಸಂಘದ ಚೌಕಟ್ಟನ್ನು ಮೀರಿ ಸಂಘದಿಂದ ಹೊರ ನಡೆದ ಹಲವಾರು ಮಹಾನ್ ನಾಯಕರು ದೇಶದಲ್ಲಿದ್ದಾರೆ. ಕಲ್ಯಾಣ್ ಸಿಂಗ್ , ಪ್ರವೀಣ್ ತೊಗಾಡಿಯಾ ಮೊದಲಾದವರೇ ಸಂಘವನ್ನು ಬಿಟ್ಟು ಹೊರ ನಡೆದಿದ್ದರೂ, ಸಂಘ ತನ್ನ ಚೌಕಟ್ಟಿಗೆ ಬದ್ಧವಾಗಿಯೇ ನಿಂತಿದೆ ಎಂದರು.
ಬಿಜೆಪಿ ಅಭ್ಯರ್ಥಿ ವಿರುದ್ಧವಾಗಿ ಪಕ್ಷೇತರವಾಗಿ ನಿಂತಿರುವ ಅರುಣ್ ಕುಮಾರ್ ಪುತ್ತಿಲರು ತಾನು ಮೋದಿ ಹೆಸರಿನಲ್ಲಿ ಮತ ಯಾಚಿಸುತ್ತಿದ್ದು, ಬಿಜೆಪಿ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯನ್ನು ಮಾಡಿರುವುದೇ ನರೇಂದ್ರ ಮೋದಿ ನೇತೃತ್ವದ ತಂಡ ಅನ್ನೋದು ಅವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ ಅವರು, ದೇಶದಲ್ಲಿ ಹಿಂದೂಗಳ ಪರವಾಗಿ ನಿಂತ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ. ಕಾಂಗ್ರೇಸ್ ಅಧಿಕಾರಕ್ಕೆ ಬಂದಲ್ಲಿ ಗೋಹತ್ಯೆ ನಿಶೇಧ ಕಾಯ್ದೆ, ಮತಾಂತರ ತಡೆ ಕಾಯ್ದೆಯನ್ನು ವಾಪಾಸು ಪಡೆಯುವುದಾಗಿ ಹೇಳಿದ್ದು, ಈ ಕಾರಣಕ್ಕಾಗಿ ಹಿಂದೂಗಳೆಲ್ಲಾ ಬಿಜೆಪಿಯನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.
ಹಿಂದೂತ್ವ ಆಧಾರದಲ್ಲಿ, ರಾಷ್ಟ್ರೀಯ ವಿಚಾರಧಾರೆಯಡಿ ಕೆಲಸ ಮಾಡುವ ಬಿಜೆಪಿ ಈ ಬಾರಿಯೂ ಅಧಿಕಾರಕ್ಕೆ ಬರಬೇಕು ಎಂಬ ಕರೆಯನ್ನು ಬಜರಂಗದಳ ಕರೆ ನೀಡುತ್ತಿದೆ. ಸಂಘಟನೆಯ ಪರವಾಗಿ, ಹಲವಾರು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಬಿಜೆಪಿ ಪಕ್ಷ ಮತಾಂತರ ನಿಷೇಧ, ಹೋಹತ್ಯೆ ಕಾನೂನು ಜಾರಿ ಮಾಡುವ ಮೂಲಕ ಹಿಂದೂಗಳ ನೋವುಗಳಿಗೆ ಸ್ಪಂದಿಸುವ ಕಾರ್ಯ ಮಾಡಿದೆ. ಅಲ್ಲದೆ ರಾಮಮಂದಿರ ನಿರ್ಮಾಣ ಇರಬಹುದು, ಹಿಂದೂ ಸಂಘಟನೆಗಳ ಹೋರಾಟಕ್ಕೆ ಸ್ಪಂದಿಸಿ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸುವುದರ ಜತೆಗೆ ದತ್ತಪೀಠದಲ್ಲಿ ಪೂಜೆ ಮಾಡಲು ಅರ್ಚಕರ ನೇಮಕ ಮಾಡಬೇಕು ಎಂಬ ಸಂಘಟನೆಯ ಹೋರಾಟಕ್ಕೆ ಬಿಜೆಪಿ ಸರಕಾರ ಧ್ವನಿಯಾಗುವುದರ ಮೂಲಕ ಸಹಕಾರ ಮಾಡಿದೆ ಎಂದರು.
ಬಿಜೆಪಿಯಿಂದ ದಿಟ್ಟ ನಿರ್ಧಾರ:
ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಎಲ್ಲಾ ಜನರು ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು. ಪುತ್ತೂರಿನ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದ ಅವರು, ಜಗತ್ತಿನಲ್ಲಿ ಬದಲಾವಣೆ ಪರ್ವ ಕಂಡಿದ್ದರೆ ಅದು ನರೇಂದ್ರ ಮೋದಿಯವರ ಆಡಳಿತದಲ್ಲಿ. ಕಾಶ್ಮೀರದಲ್ಲಿ 370 ಆರ್ಟಿಕಲ್ ಹಿಂತೆಗೆತ, ಶಾರದಾಂಬೆಯನ್ನು ಮತ್ತೆ ಪ್ರತಿಷ್ಠಾಪಿಸುವಂತಹ ದಿಟ್ಟ ನಿರ್ಧಾರಗಳನ್ನು ತೆಗದುಕೊಂಡಿದ್ದಾರೆ ಎಂದರು.
ವ್ಯಕ್ತಿಯ ಹಿಂದೆ ಹೋಗದಿರಿ:
ಬಿಜೆಪಿ ಅಧಿಕಾರದಲ್ಲಿ ಇಲ್ಲದೇ ಇರುತ್ತಿದ್ದರೆ ಹಿಂದೂಗಳಿಗೆ ಅನ್ಯಾಯವಾಗುತ್ತಿತ್ತು. ಈ ನಿಟ್ಟಿನಲ್ಲಿ ಮುಂದಿನ ಬಾರಿಯೂ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಲು ಹಿಂದುಗಳ ಪರವಾಗಿ ಸಂಘಟನೆಯ ಮೂಲಕ ನಾವು ಆಗ್ರಹ ಮಾಡುತ್ತೇವೆ ಎಂದ ಅವರು, ಸಂಘಟನೆಯ ಹೋರಾಟ ವ್ಯಕ್ತಿಯ ಮೂಲಕ ಅಲ್ಲ. ತತ್ವ ಸಿದ್ಧಾಂತ ವ್ಯಕ್ತಿಯ ಹಿಂದೆ ಹೋಗಲು ಸಾಧ್ಯವಿಲ್ಲ. ನಮ್ಮ ಹಿಂದೆ ಸಂಘಟನೆ ಇತ್ತು ಎಂಬುದನ್ನು ಯಾವತ್ತೂ ಮರೆಯಬಾರದು ಎಂದು ಹೇಳಿದರು.
ಅಶೋಕ್ ರೈಗೆ ಸವಾಲು:
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ, ಗೋಹತ್ಯೆ ಕಾಯ್ದೆ, ಪಿಎಫ್ಐ ಸಂಘಟಕರ ಮೇಲಿನ ಕೇಸುಗಳನ್ನು ವಾಪಾಸು ತೆಗೆದುಕೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಪುತ್ತೂರು ಕಾಂಗ್ರೆಸ್ ನ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹಿಂದೂಗಳ ಭಾವನೆಗಳ, ವೈಚಾರಿಕತೆಯ ಪ್ರಶ್ನೆ ಎಂದು ಗೋಹತ್ಯೆ, ಮತಾಂತರ ನಿಷೇಧ ಕಾನೂನು ಜಾರಿಯನ್ನು ವಿರೋಧಿಸುವುದಿಲ್ಲ, ಸಮಾನ ನಾಗರಿಕ ಸಂಹಿತೆ ಜ್ಯಾರಿಯನ್ನು ವಿರೋಧಿಸುವುದಿಲ್ಲ ಎಂದು ಹೇಳಲಿ, ನಾವು ಅಶೋಕ್ ಕುಮಾರ್ ರೈಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಮುಖಂಡರಾದ ಡಾ.ಕೃಷ್ಣಪ್ರಸನ್ನ,ಅಜಿತ್ ರೈ ಹೊಸಮನೆ ಉಪಸಸ್ಥಿತರಿದ್ದರು.