ನಾಗಪುರ: ಜಾಗತಿಕ ಸಂಘರ್ಷಗಳಿಗೆ ಮಾನವ ಸ್ವಾರ್ಥ ಹಿತಾಸಕ್ತಿ, ಪರರ ಮೇಲೆ ಹಿಡಿತ ಸಾಧಿಸಲು ಬಯಸುವ ಆಸೆಯೇ ಪ್ರಮುಖ ಕಾರಣ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಏಕತೆ, ಧರ್ಮದ ಪಾಲನೆ ಮತ್ತು ಶಿಸ್ತು ಇದ್ದಲ್ಲಿ ಮಾತ್ರ ಶಾಂತಿ ನೆಲೆಸಬಹುದು. ಕಳೆದ 2,000 ವರ್ಷಗಳಿಂದ ಜಗತ್ತು ಸಂಘರ್ಷಗಳನ್ನು ಪರಿಹರಿಸಲು ಹತ್ತು ಹಲವು ಸಿದ್ಧಾಂತಗಳ ಪ್ರಯೋಗ ನಡೆಸಿದೆ. ಆದರೆ, ಧಾರ್ಮಿಕ ಅಸಹಿಷ್ಣುತೆ, ಬಲವಂತದ ಮತಾಂತರ ಹಾಗೂ ಮೇಲು-ಕೀಳು ಎಂಬ ಭಾವನೆಗಳು ಇನ್ನೂ ಜೀವಂತವಾಗಿವೆ. ಭಾರತದ ಪ್ರಾಚೀನ ಜ್ಞಾನವು ‘ಎಲ್ಲರೂ ಒಂದೇ, ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿದೆ’ ಎಂಬ ಸತ್ಯವನ್ನು ಬೋಧಿಸುತ್ತದೆ. ವಿಜ್ಞಾನವೂ ಸಹ ಈಗ ಇದೇ ಹಾದಿಯಲ್ಲಿ ಸಾಗುತ್ತಿರುವುದಾಗಿ ಅವರು ಹೇಳಿದ್ದಾರೆ.
ಧರ್ಮ ಕೇವಲ ಗ್ರಂಥಗಳಿಗೆ ಸೀಮಿತವಾಗಬಾರದು. ಅದು ನಮ್ಮ ನಡವಳಿಕೆಯಲ್ಲಿಯೂ ಇರಬೇಕು. ಶಿಸ್ತು ಮತ್ತು ನೈತಿಕ ಮೌಲ್ಯಗಳ ಪಾಲನೆಗೆ ನಿರಂತರ ಅಭ್ಯಾಸ ಬೇಕು, ಅದು ಕೆಲವೊಮ್ಮೆ ವೈಯಕ್ತಿಕ ಕಷ್ಟಗಳನ್ನೂ ಬೇಡುತ್ತದೆ. ಭಾರತವು ಮಾನವೀಯತೆಯನ್ನು ನಂಬುತ್ತದೆ, ಆದರೆ ಜಗತ್ತಿನ ಇತರರು ‘ಬಲಿಷ್ಠರಷ್ಟೇ ಬದುಕಲು ಅರ್ಹ’ಎಂಬ ಸಿದ್ಧಾಂತದ ಹಿಂದೆ ಬಿದ್ದಿದ್ದಾರೆ. ಸದ್ಯದ ಜಗತ್ತಿಗೆ ಸಂಘರ್ಷಕ್ಕಿಂತ ಹೆಚ್ಚಾಗಿ ಸಾಮರಸ್ಯದ ಅಗತ್ಯವಿದೆ ಎಂದು ಕರೆ ನೀಡಿದರು.



























