ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್ ಲಾಕರಿನಲ್ಲಿ ಇರಿಸಲಾಗಿದ್ದ ಸುಮಾರು 24 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಾಣೆಯಾಗಿರುವ ಬಗ್ಗೆ ಬೆಂಗಳೂರಿನ ವೈದ್ಯೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕಿನಲ್ಲಿ 57 ವರ್ಷದ ಮಹಿಳೆ ಖಾತೆ ಮತ್ತು ಲಾಕರ್ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ಮಗನ ಮದುವೆ ಪ್ರಯುಕ್ತ ಲಾಕರಿನಲ್ಲಿ ಇರಿಸಿದ್ದ ಒಡವೆಗಳನ್ನು ತೆಗೆದುಕೊಂಡು ಹೋಗಿದ್ದ ಅವರು, ಆ ಬಳಿಕ ಅದನ್ನು ಮತ್ತೆ ಬ್ಯಾಂಕ್ ಲಾಕರಿನಲ್ಲಿ ಇರಿಸಿದ್ದರು. ಮತ್ತೆ ಕೆಲವು ಆಭರಣಗಳನ್ನು ಲಾಕರಿನಲ್ಲಿಡಲು ಕೆಲ ದಿನಗಳ ಬಳಿಕ ಅವರು ಬ್ಯಾಂಕಿಗೆ ಬಂದಿದ್ದು, ಈ ವೇಳೆ ಲಾಕರ್ ತೆರೆದಾಗ ಅವರು ಈ ಮೊದಲೇ ಇರಿಸಿದ ಆಭರಣಗಳ ಪೆಟ್ಟಿಗೆ ಮಾಯವಾಗಿತ್ತು.
ಈ ಸಂಬಂಧ ಅವರು ಬ್ಯಾಂಕ್ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದು, ಸಿಸಿಟಿವಿ ಪರಿಶೀಲನೆ ಸಹ ನಡೆಸಲಾಗಿದೆ. ಅದರೆ ಬ್ಯಾಂಕ್ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗದ ಕಾರಣ ಅವರು ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.



























