ಲೈಂಗಿಕ ಕಿರುಕುಳ ಆರೋಪ : ಮೂಡುಬಿದಿರೆ ಇನ್‌ಸ್ಪೆಕ್ಟರ್‌ರ ಇನ್ನಷ್ಟು ವಿಡಿಯೋ ಬಹಿರಂಗ

ಕಾಂಪೌಂಡ್‌ ಹಾರುವ, ಮಹಿಳೆಯ ಕೈ ಹಿಡಿದು ಡ್ಯಾನ್ಸ್‌ ಮಾಡುವ ವಿಡಿಯೋಗಳು ವೈರಲ್‌

ಮಂಗಳೂರು : ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮೂಡುಬಿದಿರೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ. ಅವರದ್ದು ಎನ್ನಲಾದ ಇನ್ನಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ದೂರು ನೀಡಲು ಬಂದ ಮಹಿಳೆಯರನ್ನೇ ಲೈಂಗಿಕ ಕ್ರಿಯೆಗೆ ಬಲವಂತಪಡಿಸಿರುವ ಆರೋಪ ಎದುರಿಸುತ್ತಿರುವ ಸಂದೇಶ್ ಪಿಜಿ ವಿರುದ್ಧ ಇದೀಗ ಇನ್ನೂ ಅನೇಕ ಆರೋಪಗಳು ಕೇಳಿಬರುತ್ತಿವೆ.

ಸಂದೇಶ್ ಪಿ.ಜಿ.ಅಡುಗೆ ಕೋಣೆಯಲ್ಲಿ ಮಹಿಳೆಯೊಬ್ಬಳ ಕೈಹಿಡಿದು ಬಲವಂತವಾಗಿ ಕುಣಿಸುತ್ತಿರುವ ಹಾಗೂ ಮನೆಯೊಂದರ ಕಾಂಪೌಂಡ್‌ ಹಾರುತ್ತಿರುವ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿವೆ. ಪೊಲೀಸ್‌ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮೇಲಧಿಕಾರಿಗಳು ಎಚ್ಚೆತ್ತಿದ್ದಾರೆ.



























































 
 

ಓರ್ವ ಮಹಿಳೆ ವಿಡಿಯೋದಲ್ಲಿ ಸಂದೇಶ್‌ ಪಿ.ಜಿ. ಕಾಂಗ್ರೆಸ್‌ನ ಯುವ ನಾಯಕರೊಬ್ಬರ ಕೃಪಾಕಟಾಕ್ಷ ಇರುವ ಬಗ್ಗೆ ಹೇಳಿಕೊಂಡಿದ್ದಾರೆ. ಆ ನಾಯಕ ಇರುವವರೆಗೆ ತನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಸಂದೇಶ್‌ ತನ್ನನ್ನು ಬೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ತಾನು ಗೃಹ ಸಚಿವರಿಗೆ 50 ಲಕ್ಷ ರೂ. ಲಂಚ ಕೊಟ್ಟು ಹುದ್ದೆ ಗಿಟ್ಟಿಸಕೊಂಡಿದ್ದೇನೆ ಎಂದು ಸಂದೇಶ್‌ ತನ್ನನ್ನು ಬೆದರಿಸುವಾಗ ಹೇಳಿಕೊಂಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ರಾಜಕೀಯ ಆಯಾಮವನ್ನು ಪಡೆದುಕೊಂಡಿದೆ.

ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತನಿಖೆಗೆ ಆದೇಶಿಸಿದ್ದು, ಯಾರಾದರೂ ಸಂತ್ರಸ್ತೆಯರಿದ್ದರೆ ಧೈರ್ಯವಾಗಿ ಬಂದು ದೂರು ನೀಡಿ, ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಅಭಯ ನೀಡಿದ್ದಾರೆ. ಆರೋಪಿ ಸಂದೇಶ್ ಹಲವಾರು ಮಹಿಳೆಯರ ಜತೆ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಆರೋಪವಿದ್ದು, ತಡರಾತ್ರಿ ಮಹಿಳೆಯೊಬ್ಬರ ಮನೆ ಕಂಪೌಂಡ್ ಹಾರಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.

ಕೌಟುಂಬಿಕ ವ್ಯಾಜ್ಯ ಅಥವಾ ದೂರು ನೀಡಲು ಬರುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಈತ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಸಂತ್ರಸ್ತೆಯೊಬ್ಬಳ ಗಂಡನನ್ನು ಕೇಸ್‌ನಲ್ಲಿ ಸಿಲುಕಿಸಿ, ಆತನನ್ನು ಬಿಡುಗಡೆ ಮಾಡಲು ‘ನನ್ನ ಜೊತೆ ಮಲಗಬೇಕು ಅಥವಾ 25 ಲಕ್ಷ ರೂಪಾಯಿ ನೀಡಬೇಕು’ ಎಂದು ಇನ್ಸ್‌ಪೆಕ್ಟರ್ ಧಮಕಿ ಹಾಕಿರುವ ವಿಷಯ ಈಗ ಬೆಳಕಿಗೆ ಬಂದಿದೆ. ‘ನಾನು ಪೋಸ್ಟಿಂಗ್‌ಗಾಗಿ ಗೃಹಸಚಿವರಿಗೆ 50 ಲಕ್ಷ ನೀಡಿ ಬಂದಿದ್ದೇನೆ’ ಎಂದು ಈತ ಅಹಂಕಾರದಿಂದ ಹೇಳಿಕೊಂಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಈ ಪ್ರಕರಣದಲ್ಲಿ ಇನ್ನೊಂದು ಕರಾಳವಾದ ಅಂಶವೆಂದರೆ, ಈ ಇನ್ಸ್‌ಪೆಕ್ಟರ್‌ ತಾನು ಲೈಂಗಿಕವಾಗಿ ಬಳಸಿಕೊಂಡ ಮಹಿಳೆಯೊಬ್ಬರ ಅಪ್ರಾಪ್ತ ಮಗಳ ಮೇಲೂ ಕೆಟ್ಟದೃಷ್ಟಿ ಬೀರಿದ್ದಾರೆ. ತನ್ನ ತೀಟೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದ ಮಹಿಳೆಯ ಅಪ್ರಾಪ್ತ ಮಗಳ ಮೇಲೆ ಕಣ್ಣುಹಾಕಿದ್ದಲ್ಲದೆ, ಆಕೆ ಓದುತ್ತಿರುವ ಕಾಲೇಜಿಗೆ ಹೋಗುತ್ತೇನೆ ಎಂದು ಫೋನ್‌ನಲ್ಲಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾನೆ. ಈ ಆರೋಪಕ್ಕೆ ಸಂಬಂಧಿಸಿದ ಆಡಿಯೋವೊಂದು ಈಗ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಈತನ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪವಿತ್ತು. ಹಿರಿಯ ಅಧಿಕಾರಿಗಳೇ ಈತನನ್ನು ರಕ್ಷಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಇದೀಗ ಪ್ರಕರಣದ ತೀವ್ರತೆ ಅರಿತ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತನಿಖೆಗೆ ಆದೇಶಿಸಿದ್ದಾರೆ. ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಅವರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ.

ಈವರೆಗೂ ಯಾವೊಬ್ಬ ಮಹಿಳೆಯೂ ಅಧಿಕೃತವಾಗಿ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿಲ್ಲ. ಯಾರಾದರೂ ಸಂತ್ರಸ್ತೆಯರಿದ್ದರೆ ಧೈರ್ಯವಾಗಿ ಬಂದು ದೂರು ನೀಡಿ, ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕಮಿಷನರ್ ಮನವಿ ಮಾಡಿದ್ದಾರೆ. ಆದರೆ ಮತ್ತೊಂದೆಡೆ, ಈಗಾಗಲೇ ಸಿಎಂ, ಗೃಹ ಸಚಿವರು ಮತ್ತು ಮಹಿಳಾ ಆಯೋಗಕ್ಕೂ ದೂರು ನೀಡಿದ್ದೇನೆ ಎಂದು ಸಂತ್ರಸ್ತ ಮಹಿಳೆ ಹೇಳಿದ್ದು, ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.

error: Content is protected !!
Scroll to Top