ವಿಜಯನಗರ: ಆಸ್ತಿಗಾಗಿ ತಮ್ಮನೇ ತನ್ನ ಅಣ್ಣನನ್ನು ಸಂಬಂಧಿಯೊಬ್ಬನ ಸಹಾಯದಿಂದ ಕೊಲೆ ಮಾಡಿರುವ ಘಟನೆ ಹರಪ್ಪನಹಳ್ಳಿಯಲ್ಲಿ ನಡೆದಿದೆ.
ಕೊಲೆಯಾದವನನ್ನು ಹಗರಿಶಿರಹಳ್ಳಿ ಗ್ರಾಮದ ಮರುಳಸಿದ್ದೇಶ್(26) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಪತ್ರಿಗೌಡ (24) ಮತ್ತು ಅವನ ಸಂಬಂಧಿ ನಾರಪ್ಪ (29) ಎಂದು ಗುರುತಿಸಲಾಗಿದೆ.
ಪತ್ರಿಗೌಡನಿಗೆ ವಿಪರೀತ ಕುಡಿಯುವ ಚಟ ಇತ್ತು. ಆತ ಅಸ್ತಿಗಾಗಿ ಕೆಲ ಸಮಯದಿಂದ ತನ್ನ ತಾಯಿಯ ಜೊತೆಗೆ ಜಗಳವಾಡುತ್ತಿದ್ದ. ಹಾಗೆಯೇ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗುವುದಾಗಿಯೂ ಜಗಳವಾಡಿದ್ದ. ಆ ಬಳಿಕ ಸಂಪೂರ್ಣ ಆಸ್ತಿ ತನಗೇ ಸೇರಬೇಕು ಎನ್ನುವ ಉದ್ದೇಶದಿಂದ ಅಣ್ಣನನ್ನು ಹತ್ಯೆ ಮಾಡಿರುವುದಾಗಿದೆ.
ಅಣ್ಣನನ್ನು ಟವೆಲ್ನಿಂದ ಉಸಿರುಗಟ್ಟಿಸಿ ಕೊಂದು ಬಳಿಕ ತಲೆಗೆ ಕಲ್ಲು ಎತ್ತಿ ಹಾಕಿ ಕೊಂದು ಅದನ್ನು ಬೈಕ್ ಅಪಘಾತ ಎಂದು ಬಿಂಬಿಸಲು ಆರೋಪಿಗಳು ಪ್ರಯತ್ನ ನಡೆಸಿದ್ದರು. ಆದರೆ ತಾಯಿ ಈ ಕೊಲೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲು ಮಾಡಿದ್ದರು.
ತನಿಖೆ ನಡೆಸಿದ ಪೊಲೀಸರು ಕೇವಲ 24 ಗಂಟೆಯಲ್ಲೇ ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.


























