ಬೆಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಸಂಘರ್ಷದ ಕಾರಣಕ್ಕೆ ರಾಜ್ಯದಲ್ಲೂ ‘ಗ್ಯಾಸ್ ಟ್ರಬಲ್’ ಸಮಸ್ಯೆ ತಲೆದೋರಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಟೇಲ್ ಉದ್ಯಮಕ್ಕೆ ಶಾಕ್ ನೀಡಿದೆ.
ಸಚಿವ ಕೆ. ಎಚ್. ಮುನಿಯಪ್ಪ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತೈಲ ಕಂಪನಿಗಳ ಜೊತೆ ಈಗಾಗಲೇ ಈ ಸಂಬಂಧ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿರುವ ಹೊಟೇಲ್‌ಗಳಿಗೆ ಸದ್ಯದ ಸ್ಥಿತಿಯಲ್ಲಿ ಗ್ಯಾಸ್ ಪೂರೈಕೆ ಕಷ್ಟಸಾಧ್ಯ ಎಂದಿದ್ದಾರೆ. ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ಏರ್‌ಲೈನ್ಸ್ ಮತ್ತು ರೈಲ್ವೆ ಕ್ಯಾಂಟೀನ್‌ಗಳಿಗೆ ಯಾವುದೇ ಅಡೆತಡೆ ಇಲ್ಲದೆ ಗ್ಯಾಸ್ ಪೂರೈಕೆಗೆ ಸರ್ಕಾರ ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ.
ರಾಜ್ಯದಲ್ಲಿನ ದೈನಂದಿನ ಬಳಕೆಯ ಆರೂವರೆ ಸಾವಿರ ಸಿಲಿಂಡರ್‌ಗಳ ಪೈಕಿ ನಾಲ್ಕು ಸಾವಿರದ ಇನ್ನೂರು ಸಿಲಿಂಡರ್‌ಗಳನ್ನು ಅಗತ್ಯ ವಲಯಕ್ಕೆಂದೇ ಮೀಸಲಿರಿಸಲಾಗಿದೆ. ಈ ಗಂಭೀರ ಸ್ಥಿತಿಯಲ್ಲಿ ಸಾರ್ವಜನಿಕರು ಗ್ಯಾಸ್ ಸಿಲಿಂಡರ್‌ಗಳ ಡಬ್ಬಲ್ ಬುಕ್ಕಿಂಗ್ ಮಾಡದೆ, ಗ್ಯಾಸ್ ಅನ್ನು ಹಿತ ಮಿತವಾಗಿ ಬಳಕೆ ಮಾಡಬೇಕು ಎಂದಿದ್ದಾರೆ.
ಹಾಗೆಯೇ ತೈಲ ಹಡಗುಗಳ ಸಂಚಾರ ಈಗಾಗಲೇ ಆರಂಭವಾಗಿದೆ. ಗ್ಯಾಸ್ ಸಮಸ್ಯೆ ಶೀಘ್ರವೇ ಬಗೆಹರಿವ ಭರವಸೆ ಇದೆ. ಮುಖ್ಯಮಂತ್ರಿಗಳೂ ಅನಿಲ ಪೂರೈಕೆ ಸರಾಗಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ.


























