ಕಡಬ: ತಾಲೂಕಿನ ಕುಟ್ರುಪ್ಪಾಡಿಯ ಯುವಕ ಸ್ಯಾಂಜೋ ಸುನಿಲ್ ಕೆಲ ದಿನಗಳ ಹಿಂದಷ್ಟೇ ಐರ್ಲೆಂಡಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಅವರ ಸಾವಿಗೆ ಸಂಬಂಧಿಸಿದ ಹಾಗೆ ಸಮಗ್ರ ರೀತಿಯಲ್ಲಿ ತನಿಖೆ ನಡೆಯಬೇಕು ಎಂದು ಕಡಬದಲ್ಲಿ ನಿನ್ನೆ ನೂರಾರು ಮಂದಿ ಕ್ಯಾಂಡಲ್ ಹಿಡಿದು ಪ್ರತಿಭಟನೆ ನಡೆಸಿದರು.
ಕಡಬದ ಕ್ರಿಶ್ಚಿಯನ್ ಲೈಟ್ನಿಂಗ್ ಕ್ಲಬ್ ಮತ್ತು ಮಲಯಾಳಿ ಸಂಘಟನೆಗಳ ನೇತೃತ್ವದಲ್ಲಿ ಅನುಗ್ರಹ ಸಭಾಭವನದಿಂದ ಸೈಂಟ್ ಜೋಕಿಮ್ಸ್ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾ ನಿರತರು, ಈ ಸಾವಿನ ಹಿಂದಿನ ಸತ್ಯಗಳು ಅನಾವರಣವಾಗಬೇಕು ಎಂದು ಆಗ್ರಹಿಸಿದರು.
ಸಾಂಜೋ ಅವರು ಮದುವೆಯಾದ ಕೆಲವು ದಿನಕ್ಕೆ ತಮ್ಮ ಪತ್ನಿಯ ಡಿಪೆಂಡ್ ವಿಸಾದ ಮೂಲಕ ಐರ್ಲೆಂಡಿಗೆ ತೆರಳಿದ್ದರು. ಆದರೆ ಅಲ್ಲಿಗೆ ಹೋದ ಕೇವಲ 28 ದಿನಗಳಲ್ಲಿಯೇ ಸಾಂಜೋ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಸಂಶಯಾಸ್ಪದ ಎಂಬಂತೆ ಮೃತಪಟ್ಟಿದ್ದರು.


























