ಕೋಕೋ ಮಿತ್ರ ಎಲ್ಲರ ಮಿತ್ರನಾಗಲಿ – ಡಾ. ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿ
ನಿಂತಿಕಲ್ಲು: ನಾಗೇಶ್ ಕೆಡೆಂಜಿ ಮ್ಹಾಲಕತ್ವದ ‘ಕೋಕೋ ಮಿತ್ರ’ – ತಂಪೊತ್ತಿನ ಗಾಣದ ತೆಂಗಿನೆಣ್ಣೆ ಉತ್ಪಾದನ ಘಟಕವು ನಿಂತಿಕಲ್ಲಿನಲ್ಲಿರುವ ಎಣ್ಮೂರು-ಮುರುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ‘ಸಾಧನಾ ಸಹಕಾರಿ ಸೌಧ’ದಲ್ಲಿ ಲೋಕಾರ್ಪಣೆಗೊಂಡಿತು. ಪವಿತ್ರ ಪಾವಕ ಪ್ರಜ್ಷಲಿಸಿ ಆಶೀರ್ವಚನ ನೀಡಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಸ್ವಾಮೀಜಿ ಪೂಜ್ಯ ಡಾ. ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ನಾಗೇಶ್ ಕೆಡೆಂಜಿಯವರ ಉದ್ಯಮಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸುಂದರವಾದ ‘ಕೋಕೋ ಮಿತ್ರ’ ಎಂಬ ಶಿರೋನಾಮೆಯೊಂದಿಗೆ ಕಾರ್ಯಾರಂಭಿಸಿದ ಅವರ ಉದ್ಯಮವು ಹೆಸರಿಗೆ ಸಂವಾದಿಯಾಗಿ ಗ್ರಾಹಕರ, ಸಮಾಜದ ಮಿತ್ರನಾಗಲಿ ಎಂದು ಆಶೀರ್ವದಿಸಿದರು. ಕೋಕೋ ಮಿತ್ರ ಹೆಸರಿನಲ್ಲಿ ಲೋಕಾರ್ಪಣೆಗೊಂಡಿರುವ ಒಟ್ಟು ಐದು ಉತ್ಪನ್ನಗಳಾದ ತಂಪೊತ್ತಿನ ಕೋಕೋ ಮಿತ್ರ ಶುದ್ಧ ತೆಂಗಿನೆಣ್ಣೆ, ಕೋಕೋ ಮಿತ್ರ ಶುದ್ಧ ಎಳ್ಳೆಣ್ಣೆ, ಕೋಕೋ ಮಿತ್ರ ರುಚಿ ರಾಜ ರೈಸ್ ರೊಟ್ಟಿ, ಕೋಕೋ ಮಿತ್ರ ಶುದ್ಧ ದೇಸಿ ಹಸುವಿನ ತುಪ್ಪ ಮತ್ತು ಕೋಕೋ ಮಿತ್ರ ನೈಸರ್ಗಿನ ಜೇನುತುಪ್ಪಗಳು ಮನುಷ್ಯನ ಸ್ವಸ್ಥ ಜೀವನಕ್ಕೆ ಅಡಿಪಾಯಗಳಾಗಿವೆ. ಆದ್ದರಿಂದ ತಮ್ಮ ಪರಿಶುದ್ಧ ಉತ್ಪನ್ನಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನೂ ಕಾಪಾಡಿದ ಹಿರಿಮೆ ನಾಗೇಶ್ರವರ ಕೋಕೋ ಮಿತ್ರಕ್ಕೆ ಸಲ್ಲುತ್ತದೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಪೂರ್ವ ಶಾಸಕ ಮತ್ತು ಸಭಾಧ್ಯಕ್ಷ ಸಂಜೀವ ಮಠಂದೂರು ಅವರು ಕೋಕೋ ಮಿತ್ರದ ಕಚೇರಿಯನ್ನು, ನಿವೃತ್ತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡರು ಕೋಕೋ ಮಿತ್ರದ ಲೋಗೋವನ್ನು, ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕೆಡೆಂಜಿಯವರು ಕೋಕೋ ಮಿತ್ರದ ವೆಬ್ಸೈಟನ್ನು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಕೋಕೋ ಮಿತ್ರದ ಎಣ್ಣೆ ಪ್ಯಾಕಿಂಗ್ ಘಟಕದ ಉದ್ಘಾಟನೆಯನ್ನು, ಎಸ್.ಆರ್.ಕೆ. ಲ್ಯಾಡರ್ಸ್ನ ಮ್ಹಾಲಕ ಮತ್ತು ಕಡಬದ ಸ್ಪಂದನಾ ಸಮುದಾಯ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಅಮೈ ಕಲಾಯಿಗುತ್ತು ಅವರು ಎಣ್ಣೆ ಪ್ಯಾಕಿಂಗ್ ಯಂತ್ರದ ಉದ್ಘಾಟನೆಯನ್ನು ಮತ್ತು ಮಂಗಳೂರಿನ ಜನತಾ ಬಝಾರ್ನ ಅಧ್ಯಕ್ಷ ಪ್ರಸನ್ನ ಭಟ್ ಅವರು ತೆಂಗಿನೆಣ್ಣೆಯ ಗಾಣದ ಉದ್ಘಾಟನೆಗಳನ್ನು ನೆರವೇರಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಪುತ್ತೂರಿನ ಪೂರ್ವ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಕೋಕೋ ಮಿತ್ರದ ಮೂಲಕ ನಾಗೇಶ್ ಕೆಡೆಂಜಿಯವರು ದೂರಗಾಮಿ ಯೋಚನೆ-ಯೋಜನೆಗಳನ್ನು ಹೊಂದಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗಳಿಗೆ ಪೂರಕವಾದ ರೀತಿಯಲ್ಲಿಯೇ ಅವರು ಉದ್ಯಮವನ್ನು ಕಟ್ಟಿದ್ದಾರೆ. ಅವರ ಈ ಪರಿಯ ಯೋಚನೆಗಳಿಗೆ ಮಾರು ಹೋಗಿಯೇ ನಾನು ಸಭಾಧ್ಯಕ್ಷ ಸ್ಥಾನ ವಹಿಸಲು ಒಪ್ಪಿಕೊಂಡಿದ್ದೆ ಎಂದರು. ಯಾರೇ ಆಗಲಿ ರಾಷ್ಟ್ರೀಯ ಚಿಂತನೆಗಳೊಂದಿಗೆ ವ್ಯವಹಾರವನ್ನು ಆರಂಭಿಸಿದಾಗ ಅವರಿಗೆ ಬೆಂಬಲ ನೀಡಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯವೇ ಆಗಿದೆ ಎಂದು ಅವರು ವಿಷದೀಕರಿಸಿದರು.
ಪರಿಶ್ರಮ ಮತ್ತು ಪ್ರಾಮಾಣಿಕತೆಗಳಿಗೆ ಬೆಲೆಯಿದೆ – ಡಾ. ಕೆ. ಚಿನ್ನಪ್ಪ ಗೌಡ
ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ನಿವೃತ್ತ ಉಪ ಕುಲಪತಿಯವರಾದ ಕನ್ನಡ ಭಾಷಾ ಪ್ರೊಫೆಸರ್ ಡಾ. ಕೆ. ಚಿನ್ನಪ್ಪ ಗೌಡರು ಮಾತನಾಡಿ ಇಂದು ಸಮಾಜಕ್ಕೆ ಬೇಕಾಗಿರುವುದು ಆರೋಗ್ಯಕರ ಆಹಾರ. ಆ ನಿಟ್ಟಿನಲ್ಲಿ ಪ್ರಯತ್ನ ಕೈಗೊಂಡಿರುವ ನಾಗೇಶ್ ಮತ್ತು ಅವರ ಬಳಗದ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿ ಪರಿಶ್ರಮ ಮತ್ತು ಪ್ರಾಮಾಣಿಕತೆಗಳಿಗೆ ಸದಾಕಾಲವೂ ಬೆಂಬಲವಿದ್ದೇ ಇರುತ್ತದೆ ಎಂದು ಪ್ರತಿಪಾದಿಸಿದರು.
ಬ್ರಾಂಡಿಂಗ್ ಮುಖ್ಯ – ಕೇಶವ ಅಮೈ ಕಲಾಯಿಗುತ್ತು
ಎಸ್.ಆರ್.ಕೆ. ಲ್ಯಾಡರ್ಸ್ ಮೂಲಕ ದೇಶಾದ್ಯಂತ ಹೆಸರು ಮಾಡಿರುವ ಮತ್ತು ಹಾಲಿ ಕಡಬದ ‘ಸ್ಪಂದನಾ’ ಸಮುದಾಯ ಸಹಕಾರಿ ಸಂಘದ ಅಧ್ಯಕ್ಷರೂ ಆಗಿರುವ ಕೇಶವ ಅಮೈ ಕಲಾಯಿಗುತ್ತು ಅವರು ಯಾವುದೇ ಉದ್ಯಮವಾದರೂ ಅದರ ಬ್ರಾಂಡಿಂಗ್ ಬಹಳ ಮುಖ್ಯವಾದುದು. ಆ ವಿಚಾರದಲ್ಲಿ ನಾಗೇಶ್ ಅವರ ಕೋಕೋ ಮಿತ್ರ ಗೆದ್ದಿದೆ ಎಂದು ಶ್ಲಾ ಘಿಸಿದರು.
ಉದ್ಯಮ ಮತ್ತು ಸಹಕಾರ ಜೋಡೆತ್ತುಗಳ ಹಾಗೆ – ಶಶಿಕುಮಾರ್ ರೈ ಬಾಲ್ಯೊಟ್ಟು
ಹಿರಿಯ ಸಹಕಾರಿ ಮತ್ತು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಮುಂದಾಳುವಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ ಉದ್ಯಮ ಮತ್ತು ಸಹಕಾರ ಕ್ಷೇತ್ರಗಳಿಗೆ ಅನ್ಯೋನ್ಯ ಸಂಬಂಧವಿದೆ. ಇಂದು ನಾಗೇಶರ ಕೋಕೋ ಮಿತ್ರ ಸಹಕಾರಿ ಸೌಧದಲ್ಲಿಯೇ ಆರಂಭವಾಗಿರುವುದು ಸಲ್ಲಕ್ಷಣವಾಗಿದೆ ಎಂದರು.
ದೇಸೀ ಸಂಸ್ಕೃತಿಗಳಿಗೆ ಮರಳುವ ಕಾಲ ಸನ್ನಿಹಿತವಾಗಿದೆ – ಪ್ರಸನ್ನ ಭಟ್
ಮಂಗಳೂರಿನ ಜನತಾ ಬಝಾರ್ನ ಅಧ್ಯಕ್ಷರಾದ ಕಲ್ಮಡ್ಕದ ನಿವಾಸಿ ಪ್ರಸನ್ನ ಭಟ್ ಮಾತನಾಡಿ ಇಂದು ಕೃಷಿ, ದೇಸೀ ಉತ್ಪನ್ನಗಳು ಮತ್ತು ಸಾವಯವದ ಉತ್ಪನ್ನಗಳಿಗೆ ವಿಪುಲ ಅವಕಾಶಗಳು ಮೂಡಿ ಬರುತ್ತಿವೆ. ನಾವು ದೇಸೀ ಪದ್ಧತಿಯನ್ನು ಉದ್ದೀಪಿಸಿದರೆ ಇಂದು ತಲೆದೋರಿರುವ ಅಡುಗೆ ಅನಿಲದ ಬಿಕ್ಕಟ್ಟಿಗೂ ಅಂಜಬೇಕಾದ್ದಿಲ್ಲ. ನಮ್ಮಲ್ಲಿ ಹಸು ಸಾಕಣೆ ಇದ್ದರೆ ಒಂದೆರಡು ಕೆ.ಜಿ. ಸೆಗಣಿಯ ಬೆರಣಿಯಲ್ಲಿ ಒಂದು ದಿನದ ಅಡುಗೆಯನ್ನು ತಯಾರಿಸಿಕೊಳ್ಳಲು ಸಾಧ್ಯವಿದೆ. ಆದ್ದರಿಂದ ದೇಸಿ ಉತ್ಪನ್ನಗಳ ಕಡೆಗೆ ಮನಸ್ಸು ಮಾಡಿರುವ ಕೋಕೋ ಮಿತ್ರ ಬಲು ಬೇಗ ಜನಪ್ರಿಯತೆ ಪಡೆಯಲಿದೆ ಎಂದು ಆಶಿಸಿದರು.
ಪರಿಶ್ರಮ ಮತ್ತು ದೈವ ಭಕ್ತಿ ಜೊತೆಯಿದ್ದಾಗ ಯಶಸ್ಸು ಖಚಿತ – ಸತೀಶ್ ಕುಮಾರ್ ಕೆಡೆಂಜಿ
ಮಾತು ಕಡಿಮೆ, ಹೆಚ್ಚು ದುಡಿಮೆ ಎಂಬ ಉಕ್ತಿಗೆ ಸರಿಯಾದ ವ್ಯಕ್ತಿತ್ವ ಹೊಂದಿರುವ ಸತೀಶ್ ಕುಮಾರ್ ಕೆಡೆಂಜಿಯವರು ಕೋಕೋ ಮಿತ್ರದ ಮ್ಹಾಲಕರಾದ ನಾಗೇಶ್ ಕೆಡೆಂಜಿಯವರು ಕಠಿಣ ಪರಿಶ್ರಮದ ಜೊತೆಗೆ ಅಪಾರ ದೈವ ಭಕ್ತಿಯನ್ನೂ ಹೊಂದಿದವರಾಗಿದ್ದಾರೆ. ಈ ಎರಡು ಗುಣಗಳು ಅವರನ್ನು ಮತ್ತು ಅವರ ಉದ್ಯಮವನ್ನೂ ಖಂಡಿತವಾಗಿಯೂ ಮೇಲೆತ್ತುತ್ತವೆ ಎಂದು ಶುಭ ಹಾರೈಸಿದರು.
ಸ್ಥಳೀಯ
ಉದ್ಯಮಗಳಿಗೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ – ವಸಂತ ನಡುಬೈಲು
ಇಂದು ನಾವು ಜಾಗತಿಕ ವ್ಯವಹಾರಗಳ ಸುಳಿಯಲ್ಲಿ ಸಿಲುಕಿದ್ದೇವೆ. ಜೊತೆಗೆ ವಿದೇಶಿ ಉತ್ಪನ್ನಗಳಿಗೆ ಮಾರು ಹೋಗಿದ್ದೇವೆ. ಆದರೆ ವಾಸ್ತವವಾಗಿ ನಮ್ಮ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ನೋಡಿದಾಗ ಸ್ಥಳೀಯ ಉತ್ಪನ್ನಗಳು ಹೆಚ್ಚು ಸಕಾಲಿಕವಾಗಿ ತೋರುತ್ತವೆ. ಇಂತಹ ಸನ್ನಿವೇಶದಲ್ಲಿ ನಮ್ಮ ದೇಶದ ಹಿತದೃಷ್ಟಿಯಿಂದ ನಾವು ಸ್ಥಳೀಯ ಉದ್ಯಮಗಳಿಗೆ ಪ್ರೋತ್ಸಾಹ ನೀಡಬೇಕಿದೆ ಎಂದು ಹೇಳಿ ಕೋಕೋ ಮಿತ್ರಕ್ಕೆ ಸರ್ವರ ಬೆಂಬಲವಿರಲಿ ಎಂದು ಕರೆ ನೀಡಿದರು.
ಸಾಂದರ್ಭಿಕತೆ, ಕೌಟುಂಬಿಕತೆ ಮತ್ತು ಗುಣಮಟ್ಟ ಖುಷಿ ನೀಡಿವೆ – ಶ್ರೀಮತಿ ವಚನಾ ಪ್ರದೀಪ್
ಪುತ್ತೂರಿನಲ್ಲಿ ಅಡೀವಾ ಸಂಸ್ಥೆಯ ಪಾಲುದಾರಳಾಗಿ ಉದ್ಯಮನಿರತರಾಗಿರುವ ಶ್ರೀಮತಿ ವಚನಾ ಪ್ರದೀಪ್ ಅವರು ಮಾತನಾಡಿ ಕೋಕೋ ಮಿತ್ರದ ನಾಗೇಶ್ ಕೆಡೆಂಜಿಯವರ ಉದ್ಯಮವನ್ನು ಗಮನಿಸಿದಾಗ ಸಮಾಜದ ಸಕಾಲಿಕ ಬೇಡಿಕೆಗಳ ಕಡೆಗೆ ಗಮನ ನೀಡಿ ಅವುಗಳನ್ನು ಪೂರೈಸಲು ಬೇಕಾದ ಸಾಂದರ್ಭಿಕ ಉತ್ಪನ್ನಗಳನ್ನು ಹೊರತಂದಿರುವುದು, ಕುಟುಂಬ ವರ್ಗವನ್ನು ಸೇರಿಸಿಕೊಂಡು ಉದ್ಯಮವನ್ನು ಆರಂಭಿಸಿರುವುದು ಮತ್ತು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿರುವುದು ಅತ್ಯಂತ ಗಮನಾರ್ಹವಾದುದು ಎಂದು ಶ್ಲಾಘಿಸಿದರು.
ನಮ್ಮೂರ ಪ್ರತಿಭೆ ನಾಗೇಶ್ ಕೆಡೆಂಜಿ – ಕೆ. ರಾಜೇಂದ್ರಪ್ರಸಾದ್ ಶೆಟ್ಟಿ
ಎಣ್ಮೂರು-ಮುರುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಮತ್ತು ಪುತ್ತೂರಿನ ಪ್ರತಿಷ್ಠಿತ ಸಮರ್ಪಣಾ ಸಹಕಾರಿ ಸಂಘದ ಅಧ್ಯಕ್ಷರೂ ಆಗಿರುವ ಕುರಿಯ ರಾಜೇಂದ್ರಪ್ರಸಾದ್ ಶೆಟ್ಟಿಯವರು ಮಾತನಾಡಿ ನಾಗೇಶ್ ಕೆಡೆಂಜಿಯವರ ಪ್ರತಿಭೆಯನ್ನು ಶ್ಲಾಘಿಸಿದರು. ಅವರು ಒಬ್ಬ ಬಹುಮುಖ ಪ್ರತಿಭಾನ್ವಿತರು ಎಂದ ಶೆಟ್ಟಿಯವರು ಕೋಕೋ ಮಿತ್ರಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದರು.
ವಿಶೇಷ ಶೈಲಿಯ ಸಭಾ ಕಾರ್ಯಕ್ರಮದ ಉದ್ಘಾಟನೆ
ಹೂವಿನಿಂದ ಅಲಂಕೃತ ತಾಜಾ ತೆಂಗಿನ ಸಸಿಗೆ ತೆಂಗಿನ ಕರಟಕದ ಚೆಂಬಿನಲ್ಲಿ ನೀರೆರೆದು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದು ಅತಿ ವಿಶೇಷವಾಗಿದ್ದು ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು. ಜೊತೆಗೆ ಸ್ಮರಣಿಕೆಗಳನ್ನು ನೀಡಲು ತೆಂಗಿನ ಟ್ರೇಗಳು, ವೇದಿಕೆಯ ಮೇಲೆ ತೆಂಗಿನ ಉತ್ಪನ್ನಗಳಾದ ವಿವಿಧ ಕಲಾಕೃತಿಗಳನ್ನ ಇರಿಸಿದ್ದು ಎಲ್ಲರಿಗೂ ಮುದ ನೀಡಿತು. ಒಟ್ಟಿನಲ್ಲಿ ಕೋಕೋ ಮಿತ್ತ ಅನ್ನುವ ಹೆಸರಿಗೆ ಸರಯಾಗಿ ಸಮಾರಂಭದ ಆಯೋಜನೆಯಾಗಿದ್ದದ್ದು ಸೃಜನಶೀಲತೆಗೆ ಸಾಕ್ಷಿಯಾಗಿತ್ತು.
ಪುತ್ತೂರಿನ ‘ನ್ಯೂಸ್ ಪುತ್ತೂರು’ನ ವ್ಯವಸ್ಥಾಪಕ Jc. HGF. ಸೀತಾರಾಮ ಕೇವಳರು ನಿರೂಪಿಸಿದ ಕಾರ್ಯಕ್ರಮದಲ್ಲಿ ಸಾನ್ವಿ ಕೆಡೆಂಜಿ, ಪುಣ್ಯ ಕೆಡೆಂಜಿ ಮತ್ತು ನಿಶಾನಿ ಕೆಡೆಂಜಿ ಪ್ರಾರ್ಥನೆ, ಕೋಕೋ ಮಿತ್ರದ ಮ್ಹಾಲಕ ನಾಗೇಶ್ ಕೆಡೆಂಜಿ ಪ್ರಸ್ತಾವನೆ ಮತ್ತು ಸ್ವಾಗತ, ಕೆಮ್ಮಲೆ ಮೆಡಿಕಲ್ಸ್ನ ಗೋಪಾಲಕೃಷ್ಣ ಹೇಮಳ ವಂದನಾರ್ಪಣೆಗಳನ್ನು ನೆರವೇರಿಸಿದರು.
ಕೋಕೋ ಮಿತ್ರದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವಸಂತ್ ಹೇಮಳ, ಮಾರುಕಟ್ಟಿ ವಿಭಾಗದ ಮುಖ್ಯಸ್ಥ ಯೋಗೀಶ್ ಕೆಡೆಂಜಿ, ಮಿಥುನ್ ಗರಡಿ, ಮಂಚಿಯ ಕರ್ನಾಟಕ ಬ್ಯಾಂಕ್ನ ಪ್ರಬಂಧಕ ಪ್ರವೀಣ್ ಕೂಡೂರು ಮತ್ತು ಬೆಳ್ಳಾರೆಯ ಶ್ರೀ ರಾಮ್ ಇಂಡಸ್ಟ್ರೀಸ್ನ ಮ್ಹಾಲಕ ಬಾಲಕೃಷ್ಣ ಕುರ್ಮಕೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ಪೂಜ್ಯ ಸ್ವಾಮೀಜಿಯವರಿಗೆ ಗೌರವಾರ್ಪಣೆ ನೀಡುವ ಸಂದರ್ಭದಲ್ಲಿ ಶ್ರೀಮತಿಯರಾದ ದಯಾಮಣಿ ನಾಗೇಶ್ ಕೆಡೆಂಜಿ ಮತ್ತು ಅಶ್ವಿತಾ ವಸಂತ್ ಹೇಮಳ ಸಹಕರಿಸಿದರು. ಶ್ರೀಮತಿ ಕವಿತಾ ಯೋಗೀಶ್ ಕೆಡೆಂಜಿ ವಿವಿಧ ಕಾರ್ಯಗಳನ್ನು ನಿಭಾಯಿಸಿದರು.


























