ಮುಂದುವರಿದ ಗ್ಯಾಸ್‌ ಸಮಸ್ಯೆ : ಅನೇಕ ಹೋಟೆಲ್‌ಗಳು ಬಂದ್‌

ಅಕ್ರಮವಾಗಿ ಸಂಗ್ರಹಿಸಿಟ್ಟವರ ಮೇಲೆ ದಾಳಿ ; ಕಾಳಸಂತೆಯಲ್ಲಿ 4 ಪಟ್ಟು ದರ

ಬೆಂಗಳೂರು: ಇಸ್ರೆಲ್-ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧದ ಪರಿಣಾಮ ಗ್ಯಾಸ್‌ ಕೊರತೆಯಾಗಿ ಜನರು ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯದ ಎಲ್ಲೆಡೆ ಸಿಲಿಂಡರ್‌ ಇಲ್ಲದೆ ಹೋಟೆಲ್‌ಗಳು ಮುಚ್ಚಿವೆ. ಈ ನಡುವೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 316 ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದೆ.

ಈ ಸಂಬಂಧ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗೃಹಬಳಕೆ ಗ್ಯಾಸ್ ಸಿಲಿಂಡರ್ ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದೆ. ಗೃಹ ಬಳಕೆ ಸಿಲಿಂಡರ್​​ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ಸಂಬಂಧ ಬೆಂಗಳೂರಿನ ಪೀಣ್ಯದಲ್ಲಿ 45, ಚಿಕ್ಕಜಾಲದಲ್ಲಿ 209, ಶಿವಮೊಗ್ಗದಲ್ಲಿ 3, ಯಾದಗಿರಿ-46, ದಾವಣಗರೆಯಲ್ಲಿ 13 ಸಿಲಿಂಡರ್​​ಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ. ಅವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಕೆಜಿಎಫ್​​ನಲ್ಲಿ ಅಕ್ರಮ ರಿಫಿಲ್ಲಿಂಗ್ ನಡೆಸುತ್ತಿದ್ದ ಗ್ಯಾಸ್ ಏಜೆನ್ಸಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

























































 
 

ವಾಣಿಜ್ಯ ಬಳಕೆಯ ಶೇ.20ರಷ್ಟು ಸಿಲಿಂಡರ್​ಗಳನ್ನು ಕೇಂದ್ರ ಸರ್ಕಾರದ ಮಾರ್ಗಸೂಚನೆಗಳಂತೆ ಆಸ್ಪತ್ರೆ, ಶಾಲಾ ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣಗಳ ಕ್ಯಾಂಟೀನ್​, ಪ್ರಮುಖ ದೇವಸ್ಥಾನಗಳಲ್ಲಿ ಪ್ರಸಾದ ವಿನಿಯೋಗ ಮಾಡಲು ಮತ್ತು ಸರ್ಕಾರಿ ಕಚೇರಿ, ವೃದ್ದಾಶ್ರಮ, ಪ್ರಮುಖ ಖಾಸಗಿ ವಲಯದ ಕಚೇಗಳಿಗೆ ಆದ್ಯತೆ ಮೇರೆಗೆ ವಾಣಿಜ್ಯ ಬಳಕೆಯ ಸಿಲಿಂಡರ್​ಗಳನ್ನು ವಿತರಿಸಲು ಆಹಾರ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

ರಾಜ್ಯದೆಲ್ಲೆಡೆ 14.2 kgಯ ಗೃಹ ಬಳಕೆಯ ಒಟ್ಟು 3,86,363 ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆಯ 6,371 ಸಿಲಿಂಡರ್​ಗಳನ್ನ ವಿತರಿಸಲಾಗಿದೆ. ಗೃಹ ಬಳಕೆಯ ಸಿಲಿಂಡರ್​ಗಳ ಉಪಯೋಗಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ ಎಂದು ಆಹಾರ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಗ್ಯಾಸ್ ಸಿಲಿಂಡರ್​ಗಳ ಕೊರತೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸೈಬರ್ ಕಿರಾತಕರು, ಗ್ಯಾಸ್ ಏಜೆನ್ಸಿಗಳ ಸೋಗಿನಲ್ಲಿ ಲಿಂಕ್​​ಗಳನ್ನು ಕಳುಹಿಸಿ ವಂಚಿಸುವ ಸಾಧ್ಯತೆಯಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ದೇಶದೆಲ್ಲೆಡೆ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ಆತಂಕಗೊಳ್ಳುತ್ತಿರುವ ನಾಗರಿಕರೂ ಗೃಹ ಬಳಕೆಯ ಸಿಲಿಂಡರ್​ಗಳಿಗಾಗಿ ಗ್ಯಾಸ್ ಬುಕ್ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸೈಬರ್ ಖದೀಮರು, ಗ್ಯಾಸ್ ಏಜೆನ್ಸಿಗಳ ಹೆಸರಿನಲ್ಲಿ ಲಿಂಕ್ ಕಳುಹಿಸಿ ವಂಚಿಸುವ ಸಾಧ್ಯತೆಯಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರದಿಂದ ಇರಬೇಕೆಂದು ಸಾಮಾಜಿಕ ಜಾಲತಾಣದ ಮೂಲಕ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.

ಕೆಲವು ದಂಧೆಕೋರರು ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಬೆಂಗಳೂರಿನಲ್ಲಿ 1,900 ರೂಪಾಯಿ ಬೆಲೆಯ ವಾಣಿಜ್ಯ ಸಿಲಿಂಡರನ್ನು ಕಾಳಸಂತೆಯಲ್ಲಿ ಸುಮಾರು 7 ಸಾವಿರ ರೂಪಾಯಿಗೆ ಮಾರಲಾಗುತ್ತಿದೆ ಎಂದು ಹೋಟೆಲ್ ಮಾಲೀಕರು ಆರೋಪಿಸಿದ್ದಾರೆ. ಮೈಸೂರಿನಲ್ಲೂ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಒಂದು ಸಿಲಿಂಡರ್‌ಗೆ 4 ರಿಂದ 5 ಸಾವಿರ ರೂಪಾಯಿ ವರೆಗೆ ಪಡೆದು ಮಾರಾಟ ಮಾಡಲಾಗುತ್ತಿದೆ ಎಂದು ಕೆಲ ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

error: Content is protected !!
Scroll to Top