ಸುಳ್ಯ: ಸ್ವಾವಲಂಬಿ ಬದುಕು ವ್ಯಕ್ತಿಯನ್ನು ಬಲಿಷ್ಠನಾಗಿಸುತ್ತದೆ. ತನ್ನ ಪರಿಶ್ರಮ ಮತ್ತು ಸಾಮರ್ಥ್ಯದಿಂದ ಬದುಕುವ ವ್ಯಕ್ತಿ ಸಮಾಜಕ್ಕೆ ಮಾದರಿಯಾಗುತ್ತಾನೆ. ಸ್ವಾವಲಂಬಿ ಬದುಕು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರೆ, ನೆಹರು ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಅನುರಾಧಾ ಕುರುಂಜಿ ಅಭಿಪ್ರಾಯಪಟ್ಟರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್, ಸುಳ್ಯ ತಾಲೂಕಿನ ದೊಡ್ಡೇರಿ ಕಾರ್ಯಕ್ಷೇತ್ರದಲ್ಲಿ ಅಮೃತ ಜ್ಞಾನವಿಕಾಸ ಕೇಂದ್ರದಲ್ಲಿ ಮೂರು ತಿಂಗಳ ಕಾಲ ನಡೆದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಇಂದು ಮಹಿಳೆಯರಿಗೆ ಎಷ್ಟೋ ಮಾಹಿತಿಗಳು ಸೌಲಭ್ಯಗಳು ದೊರೆಯುತ್ತಿವೆ. ಇದರಿಂದ ಮುಂದಿನ ದಿನದಲ್ಲಿ ಮಹಿಳೆ ಸ್ವಾವಲಂಬಿಯಾಗಿ ತಮ್ಮ ಕುಟುಂಬವನ್ನು ಮುನ್ನಡೆಸಿಕೊಂಡು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆಯಲು ಸಹಾಯವಾಗುತ್ತದೆ ಎಂದರು.
ದೊಡ್ಡೇರಿ ಕಾರ್ಯಕ್ಷೇತ್ರದ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯಿಂದ ಸದಸ್ಯರಿಗೆ ಆದ ಪ್ರಯೋಜನಗಳು ಹಲವು. ಪೂಜ್ಯರು ಹಾಗೂ ಮಾತೃಶ್ರೀ ಅಮ್ಮನವರ ಮೂಲ ಪರಿಕಲ್ಪನೆಯಿಂದ ಸಮಾಜದಲ್ಲಿ ಅದೆಷ್ಟೋ ಒಳ್ಳೆಯ ಕಾರ್ಯಕ್ರಮಗಳು ನಡೆದು ಫಲಾನುಭವಿಗಳಲ್ಲಿ, ಅವರ ಕುಟುಂಬದಲ್ಲಿ ಆದ ಬದಲಾವಣೆಯನ್ನು ಹೇಳಿದರು. ಇಲ್ಲಿ ಪಡೆದ ತರಬೇತಿಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಶುಭ ಹಾರೈಸಿದರು.
ಕೊಡಿಯಾಲ್ ಬೈಲು ಶಾಲಾ ಮುಖ್ಯೋಪಾಧ್ಯಾಯೆ ಸವಿತಾ ಸುಬ್ಬಯ್ಯ ಮಾತನಾಡಿ, ಮೂರು ತಿಂಗಳಿನಿಂದ ಮಹಿಳೆಯರು ತರಬೇತಿಯಿಂದ ಬಹಳಷ್ಟು ಪಡೆದುಕೊಂಡರು. ಈ ಮೂಲಕ ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಒಂದು ಹೆಜ್ಜೆಯನ್ನು ಮುಂದೆ ಇಟ್ಟಂತಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ತಾಲೂಕು ಸರ್ಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕ ಬಾಲಕೃಷ್ಣ ಮಾತನಾಡಿ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಆಸ್ಪತ್ರೆಯ ಮೆಡಿಕಲ್ ಸೋಶಿಯಲ್ ವರ್ಕರ್ ಹೇಮಂತ್ ಮಾತನಾಡಿ ಕ್ಯಾನ್ಸರ್ ಕಾಯಿಲೆ ಹಾಗೂ ತಪಾಸಣಾ ಅಗತ್ಯತೆಯ ಬಗ್ಗೆ ತಿಳಿಸಿದರು.
ಹೊಲಿಗೆ ತರಬೇತಿ ನೀಡಿದ ಶಿಕ್ಷಕಿ ಹೇಮಾವತಿ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು.
ತರಬೇತಿಯಲ್ಲಿ ಭಾಗವಹಿಸಿದ ಸದಸ್ಯರಿಗೆ ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಲಾಯಿತು. ಹೊಲಿಗೆ ತರಬೇತಿ ನೀಡಿದ ಹೇಮಾವತಿ ದಂಪತಿಗಳನ್ನು ಗೌರವಿಸಲಾಯಿತು.
ತರಬೇತಿಯಲ್ಲಿ ಭಾಗವಹಿಸಿದ ಸದಸ್ಯರಾದ ಕೃತಿ ಮತ್ತು ಚೇತನ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ವಲಯ ಭಜನಾ ಪರಿಷತ್ ಕೋಶಾಧಿಕಾರಿ ರೇವತಿ ರಾಧಾಕೃಷ್ಣ, ಜನಜಾಗೃತಿ ಸದಸ್ಯ ಸುಂದರ ನಾಯ್ಕ, ವಲಯದ ಮೆಲ್ವಿಚಾರಕಿ ಅನಿತಾ, ಕಾಂತಮಂಗಲ ಒಕ್ಕೂಟದ ಅಧ್ಯಕ್ಷ ಸತೀಶ್, ಸೇವಾ ಪ್ರತಿನಿಧಿ ಉಷಾ ಒಕ್ಕೂಟದ ಪದಾಧಿಕಾರಿಗಳು, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾದಿಕಾರಿ ಲಕ್ಷ್ಮಿ ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಪ್ರಗತಿ ಬಂಧು ಸಂಘದ ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕೊನೆಯಲ್ಲಿ ಹೊಲಿಗೆ ತರಬೇತಿ ಪಡೆದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜನರ ಆರೋಗ್ಯ ತಪಾಸಣೆ ನಡೆಯಿತು.

























