ಅನ್ಯಮಾರ್ಗಗಳ ಮೂಲಕ ಕಚ್ಚಾತೈಲ ಆಮದು; ಸಿಲಿಂಡರ್‌ಗಾಗಿ ಮುಗಿಬೀಳುವ ಅಗತ್ಯವಿಲ್ಲ
ನವದೆಹಲಿ: ಮಧ್ಯಪ್ರಾಚ್ಯದ ಯುದ್ಧದಿಂದಾಗಿ ದೇಶಾದ್ಯಂತ ಗ್ಯಾಸ್ ಕೊರತೆಯಿಂದ ಹಾಹಾಕಾರ ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಎಲ್‌ಪಿಜಿ ದಾಸ್ತಾನು ಸಾಕಷ್ಟಿದೆ, ಎರಡೂವರೆ ದಿನಗಳಲ್ಲಿ ಪೂರೈಕೆಯಾಗಲಿದೆ ಎಂದು ಭರವಸೆ ನೀಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವಾಲಯ, ಹೊರ್ಮುಜ್ ಜಲಸಂಧಿಯ ಬದಲಿಗೆ ಅನ್ಯ ಮಾರ್ಗಗಳ ಮೂಲಕ ಕಚ್ಚಾತೈಲ ಆಮದು ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಅನಿಲ ಪೂರೈಕೆ ಮತ್ತಷ್ಟು ಸುಧಾರಿಸಲಿದೆ. ಹೀಗಾಗಿ ಜನರು ಭಯ ಬೀಳುವ ಅಗತ್ಯವಿಲ್ಲ, ಸಿಲಿಂಡರ್‌ಗಾಗಿ ಮುಗಿಬೀಳುವ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದೆ. ಕಾಳಸಂತೆಯಲ್ಲಿ ಸಿಲಿಂಡರ್ ಮಾರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದೆ.
ಎಲ್‌ಪಿಜಿ ಸಿಲಿಂಡರ್ ಖರೀದಿಸಲು ಜನರು ಮುಗಿಬೀಳುವ ಅಗತ್ಯವಿಲ್ಲ. ಎಂದಿನಂತೆ ಎರಡೂವರೆ ದಿನಗಳಲ್ಲಿ ಪೂರೈಕೆ ಮಾಡಲಾಗುತ್ತದೆ ಎಂದು ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮ ತಿಳಿಸಿದ್ದಾರೆ. ತಪ್ಪು ಮಾಹಿತಿಯಿಂದ ಭಯಭೀತರಾಗಿರುವ ಗ್ರಾಹಕರು ಎಲ್‌ಪಿಜಿ ಸಿಲಿಂಡರ್ ಖರೀದಿಗೆ ಸಾಲುಗಟ್ಟಿ ನಿಂತಿದ್ದಾರೆ. ಆದರೆ ನಮ್ಮ ಸಾಕಷ್ಟು ದಾಸ್ತಾನು ಇರುವುದರಿಂದ ಬೇಡಿಕೆಗೆ ಅನುಸಾರ ಪೂರೈಕೆ ಮಾಡಲಾಗುತ್ತಿದೆ ಎಂದಿದ್ದಾರೆ.
ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡುವ ವ್ಯವಸ್ಥೆಗೆ ಧಕ್ಕೆ ಆಗಿಲ್ಲ. ಕಚ್ಚಾತೈಲವನ್ನು ಹೊರ್ಮುಜ್ ಜಲಸಂಧಿಯನ್ನು ಹೊರತು ಪಡಿಸಿ ಅನ್ಯ ಮಾರ್ಗಗಳ ಮೂಲಕ ತರಿಸಿಕೊಳ್ಳಲಾಗುತ್ತಿದೆ. ಸರ್ಕಾರದ ತ್ವರಿತ ಕ್ರಮಗಳಿಂದ ಎಲ್‌ಜಿಪಿ ತಯಾರಿಕೆಯಲ್ಲಿ ಶೇ.25ರಷ್ಟು ಏರಿಕೆಯಾಗಿದೆ. ಇದಲ್ಲದೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ನಾವು 40ಕ್ಕೂ ಹೆಚ್ಚು ದೇಶಗಳಿಂದ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮಗೆ ಪ್ರತಿದಿನ 55 ಲಕ್ಷ ಬ್ಯಾರಲ್ ಕಚ್ಚಾತೈಲ ಬೇಕು. ವಿವಿಧ ಮೂಲಗಳಿಂದ ನಾವು ಇಂದು ಪಡೆದಿರುವ ಕಚ್ಚಾತೈಲದ ಪ್ರಮಾಣ ಹೆಚ್ಚೇ ಇದೆ. ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಬೇರೆ ಬೇರೆ ಕಡೆಗಳಿಂದ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿವೆ. ಹೀಗಾಗಿ ಈಗ ಶೇ.70ರಷ್ಟು ಕಚ್ಚಾ ತೈಲ ಆಮದಿಗೆ ಹೊರ್ಮುಜ್ ಜಲಸಂಧಿಯನ್ನು ಬಳಸಬೇಕಾದ ಅಗತ್ಯ ಇಲ್ಲ. ಎಲ್‌ಎನ್‌ಜಿ ಹೊತ್ತ ಎರಡು ಹಡಗುಗಳು ಕೆಲವೇ ದಿನಗಳಲ್ಲಿ ಭಾರತ ತಲುಪಲಿವೆ, ಆಗ ದೇಶದಲ್ಲಿ ಇಂಧನ ಪೂರೈಕೆಯು ಇನ್ನಷ್ಟು ಸುಧಾರಿಸಲಿದೆ ಎಂದು ಸುಜಾತಾ ಶರ್ಮ ಮಾಹಿತಿ ನೀಡಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಭಾರತದಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ವಾಣಿಜ್ಯ ಸಿಲಿಂಡರ್‌ಗಳು ಸಿಗದ ಕಾರಣ ಬೆಂಗಳೂರು, ಮುಂಬೈ, ಚೆನ್ನೈ ಸೇರಿದಂತೆ ಅನೇಕ ನಗರಗಳಲ್ಲಿ ಹೋಟೆಲ್‌ಗಳ ನಿರ್ವಹಣೆಯೇ ಕಷ್ಟಕರವಾಗಿ ಪರಿಣಮಿಸಿದೆ. ಹೀಗಾಗಿ ಬೆಂಗಳೂರಿನ ಬಹುತೇಕ ಹೋಟೆಲ್‌ಗಳು ಅಡುಗೆ ಅನಿಲ ಹೆಚ್ಚು ಬಳಕೆಯಾಗುವ ತಿಂಡಿಗಳನ್ನು ತಮ್ಮ ಮೆನುವಿನಿಂದಲೇ ತೆಗೆದಿವೆ. ಹೀಗಾಗಿ ಹಲವೆಡೆ ದೋಸೆ, ಗೋಬಿ ಮಂಚೂರಿ ಮೊದಲಾದ ತಿಂಡಿಗಳು ಸಿಗುತ್ತಿಲ್ಲ. ಇನ್ನು ಅನೇಕ ಕಡೆಗಳಲ್ಲಿ ಸೌದೆ, ಇಂಡಕ್ಷನ್ ಸ್ಟವ್‌ಗಳ ಬಳಕೆಯನ್ನು ಹೆಚ್ಚು ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಪಂಚತಾರಾ ಹೋಟೆಲ್‌ಗಳಲ್ಲೂ ಸೌದೆ ಒಲೆಗಳನ್ನು ಬಳಸಲಾಗುತ್ತಿದೆ.

























