ಕಡಬ: ತೋಟಕ್ಕೆ ಬಂದ ದನಗಳನ್ನು ಓಡಿಸಲು ಹೋಗಿ ಆಕಸ್ಮಿಕವಾಗಿ ಬಿದ್ದು ಮಹಿಳೆ ಮೃತಪಟ್ಟ ಘಟನೆ ಕೊಣಾಲು ಗ್ರಾಮದಲ್ಲಿ ನಡೆದಿದೆ.
ಪಾತೃಪಾಡಿ ನಿವಾಸಿ ಲೀಲಾವತಿ ಶೆಟ್ಟಿ (64) ಮೃತ ದುರ್ದೈವಿ.
ಮಾ. 11 ರ ಸಂಜೆ ಹೊತ್ತಲ್ಲಿ ಲೀಲಾವತಿ ಅವರ ತೋಟಕ್ಕೆ ದನಗಳು ಮೇಯಲು ಬಂದಿದ್ದು, ಅವುಗಳನ್ನು ಓಡಿಸಲು ಹೋಗಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಬಿದ್ದು ಅವರು ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ರಾತ್ರಿ ಲೀಲಾವತಿ ಅವರ ಪುತ್ರ ಹರೀಶ್ ಅವರು ಕೆಲಸ ಮುಗಿಸಿ ಮನೆಗೆ ಬಂದಾಗ ಬಾಗಿಲು ತೆರೆದೇ ಇದ್ದು, ತಾಯಿ ಮನೆಯೊಳಗಿರಲಿಲ್ಲ. ಸ್ಥಳೀಯರ ಜೊತೆ ಹುಡುಕಾಟ ನಡೆಸಿದಾಗ ಅವರು ತೋಟದಲ್ಲಿ ಬಿದ್ದು ಮೃತಪಟ್ಟಿರುವುದು ಪತ್ತೆಯಾಗಿದೆ.
ಲೀಲಾವತಿ ಅವರ ಕೈಯಲ್ಲಿ ಕಲ್ಲು ಮತ್ತು ದೊಣ್ಣೆ ಇದ್ದು, ಇದರಿಂದ ಅವರು ದನಗಳನ್ನು ಓಡಿಸಲು ಹೋಗಿರಬಹುದು, ಆಗ ಬಿದ್ದು ಕೈಯಲ್ಲಿದ್ದ ಕಲ್ಲು ಹಣೆಗೆ ತಾಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

























