ಸಾವಿರಾರು ಮಾಲೀಕರು, ಲಕ್ಷಾಂತರ ಕಾರ್ಮಿಕರಿಗೆ ಸಂಕಷ್ಟ ಸ್ಥಿತಿ
ಮಂಗಳೂರು : ಮಧ್ಯಪ್ರಾಚ್ಯದ ಯುದ್ಧದಿಂದಾಗಿ ರಾಜ್ಯದಲ್ಲಿ ಎದುರಾಗಿರುವ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಕೊರತೆ ಹೋಟೆಲ್ ಮಾಲೀಕರನ್ನು ಸಂಕಷ್ಟಕ್ಕೆ ದೂಡಿದೆ. ಕರಾವಳಿಯೂ ಸೇರಿದಂತೆ ರಾಜ್ಯಾದ್ಯಂತ ಕಮರ್ಷಿಯಲ್ ಸಿಲಿಂಡರ್ ಸಿಗದೆ ಹೋಟೆಲ್, ಬೇಕರಿ, ಕ್ಯಾಂಟೀನ್ ಮಾಲೀಕರು ಒದ್ದಾಡುತ್ತಿದ್ದಾರೆ. ಈಗಾಗಲೇ ಕೆಲವು ಹೋಟೆಲ್ಗಳು ಅನಿವಾರ್ಯವಾಗಿ ಮುಚ್ಚಿವೆ.
ಸಿಲಿಂಡರ್ ಸಿಗದೆ ಅಡುಗೆ ಮಾಡುವುದು ಅಸಾಧ್ಯವಾಗಿದ್ದು, ಇನ್ನೂ ಹಲವು ಹೋಟೆಲ್ಗಳು ಮುಚ್ಚುವ ಹಂತಕ್ಕೆ ತಲುಪಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬಹುತೇಕ ಹೋಟೆಲ್ಗಳನ್ನು ಮುಚ್ಚಬೇಕಾಗಬಹುದು ಎಂದು ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ. ಇದರ ಜೊತೆಗೆ ಮದುವೆ, ನಿಶ್ಚಿತಾರ್ಥದಂಥ ಕಾರ್ಯಕ್ರಮಗಳಿಗೂ ಗ್ಯಾಸ್ ಕೊರತೆ ಉಂಟಾಗಿದೆ. ದೇವಸ್ಥಾನಗಳ ಅನ್ನದಾನ ವ್ಯವಸ್ಥೆಗೂ ಗ್ಯಾಸ್ ಕೊರತೆ ಎದುರಾಗುವ ಭೀತಿ ತಲೆದೋರಿದೆ.
ಬೇಯಲು ಹೆಚ್ಚು ಗ್ಯಾಸ್ ಬಳಸುವ ಐಟಂಗಳಾದ ಪುರಿ, ದೋಸೆ ಸೇರಿದಂತೆ ಕೆಲವು ಪ್ರಮುಖ ಉಪಹಾರಗಳನ್ನು ತಯಾರಿಸುವುದನ್ನು ಕೆಲವು ಹೋಟೆಲ್ ಮಾಲೀಕರು ಸ್ಥಗಿತಗೊಳಿಸಿದ್ದಾರೆ. ಗ್ಯಾಸ್ ಉಳಿತಾಯ ಮಾಡಲು ಕೇವಲ ಸೀಮಿತ ತಿಂಡಿಗಳನ್ನು ಮಾತ್ರ ತಯಾರಿಸಲಾಗುತ್ತಿದೆ. ವ್ಯಾಪಾರ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮತ್ತು ಖರ್ಚು ನಿಭಾಯಿಸಲು ಸಾಧ್ಯವಾಗದೆ ಹೋಟೆಲ್ ಮಾಲೀಕರು ಈಗಾಗಲೇ ತಮ್ಮ ಸಿಬ್ಬಂದಿ ಸಂಖ್ಯೆಯನ್ನೂ ಕಡಿತಗೊಳಿಸುತ್ತಿದ್ದಾರೆ. ಹೋಟೆಲ್ ನಂಬಿ ಜೀವನ ಮಾಡುತ್ತಿರುವ ಸಾವಿರಾರು ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೋಟೆಲ್ ಬಂದ್ ಆದರೆ ನಮ್ಮ ಕುಟುಂಬದ ಗತಿ ಏನು? ಎಂದು ಕೆಲಸಗಾರರು ಕಣ್ಣೀರು ಹಾಕುತ್ತಿದ್ದಾರೆ. ಕೆಲವು ಸಣ್ಣ ಹೋಟೆಲ್ಗಳು ಈಗಾಗಲೇ ಬಾಗಿಲು ಹಾಕಿದ್ದರೆ, ದೊಡ್ಡ ಹೋಟೆಲ್ಗಳು ದಾಸ್ತಾನು ಇರುವಷ್ಟು ದಿನ ಮಾತ್ರ ವ್ಯವಹಾರ ನಡೆಸಲು ಮುಂದಾಗಿವೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮ ಕಂಗೆಟ್ಟಿದೆ. ಈಗ ಸಿಲಿಂಡರ್ ಸಿಗದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೋಟೆಲ್ ಉದ್ಯಮವನ್ನು ನಂಬಿ ರಾಜ್ಯದಲ್ಲಿ ಕೋಟ್ಯಂತರ ಜನರು ಬದುಕು ಕಟ್ಟಿಕೊಂಡಿದ್ದಾರೆ. ಗ್ಯಾಸ್ ಪೂರೈಕೆ ಸಮರ್ಪಕವಾಗದಿದ್ದರೆ ಮುಂದೆ ದಾರಿ ಕಾಣದಂತಾಗಿದೆ ಎಂದು ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೂಡಲೇ ಈ ಗಂಭೀರ ಪರಿಸ್ಥಿತಿಯನ್ನು ಗಮನಿಸಿ, ಸಮರ್ಪಕ ಗ್ಯಾಸ್ ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಉದ್ಯಮ ಸಂಪೂರ್ಣವಾಗಿ ಕುಸಿಯಲಿದೆ ಎಂದು ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಲವು ಹೋಟೆಲ್ ಮಾಲೀಕರು ಹೆಚ್ಚು ಗ್ಯಾಸ್ ವ್ಯಯವಾಗುವ ಉದ್ದಿನ ವಡೆ, ಬಜ್ಜಿ, ಪಕೋಡ, ಪೂರಿ ಮತ್ತು ಗೋಬಿ ಮಂಚೂರಿಯನ್ನಂತಹ ತಿಂಡಿಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಕಡಿಮೆ ಗ್ಯಾಸ್ ಬಳಸುವ ಚಿತ್ರಾನ್ನ, ಪಲಾವ್, ಬಿಸಿಬೇಳೆ ಬಾತ್ನಂತಹ ರೈಸ್ ಐಟಂಗಳ ತಯಾರಿಕೆಗೆ ಹೋಟೆಲ್ಗಳು ಹೆಚ್ಚಿನ ಒಲವು ತೋರುತ್ತಿವೆ.
ವಾಣಿಜ್ಯ ಸಿಲಿಂಡರ್ಗಳ ದಾಸ್ತಾನು ಕುಸಿದಿರುವುದರಿಂದ ಇರುವ ಅಲ್ಪಪ್ರಮಾಣದ ಗ್ಯಾಸ್ ಬಳಸಿ ದಿನದ ವ್ಯಾಪಾರ ಮುಗಿಸುವುದು ಹೋಟೆಲ್ ಮಾಲೀಕರಿಗೆ ಸವಾಲಾಗಿದೆ. ಎಣ್ಣೆಯಲ್ಲಿ ಕರೆಯುವ ತಿಂಡಿಗಳಿಗೆ ನಿರಂತರವಾಗಿ ಹೆಚ್ಚಿನ ಉರಿ ಬೇಕಾಗುತ್ತದೆ, ಇದು ಸಿಲಿಂಡರ್ ಶೀಘ್ರವಾಗಿ ಖಾಲಿಯಾಗಲು ಕಾರಣವಾಗುತ್ತದೆ. ಆದ್ದರಿಂದ ಅನಿವಾರ್ಯವಾಗಿ ಸ್ನ್ಯಾಕ್ಸ್ ವಿಭಾಗಕ್ಕೆ ಹೋಟೆಲ್ಗಳು ಕೋಕ್ ನೀಡಿವೆ. ಇದರಿಂದ ಹೋಟೆಲ್ಗಳ ಒಟ್ಟಾರೆ ಆದಾಯದಲ್ಲಿ ಶೇ.30ರಿಂದ 40ರಷ್ಟು ಕುಸಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
























