ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

ಉಳ್ಳಾಲ: ಕೆಲಸಕ್ಕೆಂದು ಮನೆಯಿಂದ ತೆರಳಿ ಸೋಮವಾರದಿಂದ ನಾಪತ್ತೆಯಾಗಿದ್ದ ಯುವಕನ ಮೃತ ದೇಹ ಸೋಮೇಶ್ವರ ಸೋಮನಾಥ ಗದಾತೀರ್ಥ ಕೆರೆಯಲ್ಲಿ ಪತ್ತೆಯಾಗಿದೆ.

ಮೃತನನ್ನು ವಿವೇಕ್ ಶೆಟ್ಟಿಗಾರ್(32) ಎಂದು ಗುರುತಿಸಲಾಗಿದೆ. ಪತ್ನಿಯಿಂದ ‌ವಿಚ್ಛೇದನಗೊಂಡು ಖಿನ್ನತೆಯಿಂದ ವಿವೇಕ್ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ವಿವೇಕ್ ಕದ್ರಿ ವೇದ ಮೋಟಾರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಸೋಮವಾರ ಕೆಲಸಕ್ಕೆಂದು ‌ಮನೆಯಿಂದ ಹೋಗಿದ್ದರು. ಅದೇ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ತಾಯಿಗೆ ಕರೆ ಮಾಡಿ ತಾನು ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿದ್ದರು. ಆದರೆ ರಾತ್ರಿ 12 ಗಂಟೆಯಾದರೂ ‌ವಿವೇಕ್ ಮನೆಗೆ ಮರಳಿಲ್ಲ. ಅವರಿಗೆ ಕರೆ ಮಾಡಿದಾಗಲೂ ಸ್ವೀಕರಿಸಿಲ್ಲ. ಮಂಗಳವಾರವೂ ಮನೆಗೆ ಬರದ ವಿವೇಕ್ ಅವರು ಕರೆಯನ್ನೂ ‌ಸ್ವೀಕರಿಸಿಲ್ಲ. ಇದರಿಂದ ಗಾಬರಿಯಾದ ಮನೆಯವರು ಹುಡುಕಾಟ ಆರಂಭಿಸಿದ್ದಾರೆ.





















































 
 

ಹಾಗೆಯೇ ಕೊಣಾಜೆ ಪೊಲೀಸ್ ಠಾಣೆಯಲ್ಲಿ ‌ವಿವೇಕ್ ಕಾಣೆಯಾಗಿರುವ ಬಗ್ಗೆ ದೂರನ್ನು ‌ಸಹ ನೀಡಿದ್ದಾರೆ.

ಮಂಗಳವಾರ ಬೆಳಗ್ಗೆ ಸೋಮೇಶ್ವರ ಕಡಲ ಕಿನಾರೆಯಲ್ಲಿ ವಿವೇಕ್ ಅವರ ಬೈಕ್, ಚಪ್ಪಲಿಗಳು ಕಂಡುಬಂದಿದ್ದವು. ವಿವೇಕ್ ಅವರಿಂದ ಪತ್ನಿ ವಿಚ್ಛೇದನ ಪಡೆದು ಕೆಲ ದಿನಗಳ ಹಿಂದಷ್ಟೇ ಬೇರೊಂದು ಮದುವೆಯಾಗಿದ್ದರು. ಇದು ಅವರನ್ನು ಖಿನ್ನತೆಗೆ ದೂಡಿತ್ತು ಎಂದು ಹೇಳಲಾಗುತ್ತಿದೆ.

ಮೃತರು ‌ತಂದೆ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.

error: Content is protected !!
Scroll to Top