ಇರಾನ್ ವಾಯುನೆಲೆ, ನೌಕಾನೆಲೆ ಧ್ವಂಸ, ಸಂಪರ್ಕ ಕಡಿತ ಎಂದ ಅಧ್ಯಕ್ಷ
ಅಮೆರಿಕ: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಜಗತ್ತಿನಾದ್ಯಂತ ಕೋಲಾಹಲ ಸೃಷ್ಟಿಸಿರುವಂತೆಯೇ ಡೊನಾಲ್ಡ್ ಟ್ರಂಪ್ ಯುದ್ಧ ನಿಲ್ಲಿಸುವ ಕುರಿತು ಮಾತನಾಡಿದ್ದಾರೆ. ಫೆಬ್ರವರಿ 28ರಿಂದ ನಡೆಯುತ್ತಿರುವ ಅಮೆರಿಕ, ಇಸ್ರೇಲ್ ಮತ್ತು ಇರಾನ್ ಮೇಲಿನ ಸಂಘರ್ಷ ಕೊನೆಯಾಗುವ ಸುದ್ದಿ ಸಿಕ್ಕಿದೆ.
ಇರಾನ್ ಯುದ್ಧ ಶೀಘ್ರ ಕೊನೆಗೊಳ್ಳಲಿದೆ ಎಂದು ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿಕೆ ನೀಡಿದ್ದಾರೆ. ಫ್ಲೋರಿಡಾದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಟೆಹ್ರಾನ್ ಯಾವುದೇ ಚಾಲಕಿತನ ಮಾಡಬಾರದು, ಇದಕ್ಕೆ ಪ್ರಯತ್ನಿಸಿದರೆ ಅಮೆರಿಕ ಇರಾನ್ ದೇಶವನ್ನೇ ಮುಗಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಇರಾನ್ ಯುದ್ಧ ಅಲ್ಪ ಅವಧಿಯ ವಿಹಾರ ಎಂದು ಕರೆದಿದ್ದಾರೆ.

ಇರಾನ್‌ನ ವಾಯುನೆಲೆ, ನೌಕಾನೆಲೆ ಎಲ್ಲವೂ ಧ್ವಂಸವಾಗಿದೆ. ಸಂಪರ್ಕವೇ ಕಡಿತಗೊಂಡಿದೆ. ಹಾಗಾಗಿ ಯುದ್ಧದಲ್ಲಿ ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳ ಗೆಲುವಾಗಿದೆ ಎಂದು ಘೋಷಿಸಿಕೊಂಡರೂ ಅದು ಸಾಲುವುದಿಲ್ಲ, ಅಂತಿಮ ಗೆಲುವಿಗೆ ಮತ್ತಷ್ಟು ಗಟ್ಟಿಯಾಗಿ ಹೆಜ್ಜೆ ಇಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಯುದ್ಧ ಇಷ್ಟು ಬೇಗ ಮುಗಿಯುವುದಿಲ್ಲ, ಇರಾನ್ ಸಂಪೂರ್ಣ ಶರಣಾಗತಿಯಾದೆ ಯುದ್ಧ ನಿಲ್ಲುವುದಿಲ್ಲ ಎಂದಿದ್ದ ಟ್ರಂಪ್ ಅವರ ಮಂಗಳವಾರದ ಹೇಳಿಕೆ ಅಚ್ಚರಿ ತಂದಿದೆ. ಯುದ್ಧ ಬೇಗ ಮುಗಿಯುತ್ತದೆ. ಒಂದು ವೇಳೆ ಅವರು ಮತ್ತೆ ಆರಂಭಿಸಿದರೆ ಮತ್ತಷ್ಟು ಗಂಭೀರವಾಗಿ ಅವರ ಮೇಲೆ ದಾಳಿಯಾಗಲಿದೆ. ಕೆಲವು ವ್ಯಕ್ತಿಗಳನ್ನು ನಾಶಪಡಿಸಲು ಈ ಅಲ್ಪಾವಧಿಯ ಯುದ್ಧ ಮಾಡಲೇಬೇಕಿತ್ತು ಎಂದು ಹೇಳಿದ್ದಾರೆ.
ಅಲ್ಲಿ ಯಾವೆಲ್ಲಾ ದಾಳಿಯಾಗಬೇಕಿತ್ತೋ ಎಲ್ಲ ಆಗಿದೆ, ಇದರ ಮೇಲೂ ಇರಾನ್ ಏನಾದರೂ ಮುಂದುವರಿದರೆ ಆ ದೇಶವೇ ಕೊನೆಗೊಳ್ಳಲಿದೆ. ನಂತರ ಯಾವತ್ತೂ ಇರಾನ್ ಎಂಬ ಹೆಸರೂ ಕೇಳಲು ಸಿಗುವುದಿಲ್ಲ ಎಂದಿದ್ದಾರೆ.
ನಾವು ಈಗಾಗಲೇ ಗೆದ್ದಿದ್ದೇವೆ. ಆದರೆ ಪೂರ್ಣವಾಗಿ ಗೆದ್ದಿಲ್ಲ. ಅಂತಿಮ ವಿಜಯ ಅಂದರೆ ದೀರ್ಘಕಾಲದ ಅಪಾಯವನ್ನು ಶಾಶ್ವತವಾಗಿ ಕೊನೆಗೊಳಿಸಲು ಮತ್ತಷ್ಟು ದೃಢಸಂಕಲ್ಪದಿಂದ ಮುಂದುವರಿಯುತ್ತೇವೆ. ಅಮೆರಿಕ ಮಾನವ ಇತಿಹಾಸದಲ್ಲೇ ಶ್ರೇಷ್ಠ ರಾಷ್ಟ್ರವಾಗಿದ್ದು, ದುಷ್ಠ ಭಯೋತ್ಪಾದಕರು ಹಾಗೂ ಹುಚ್ಚರ ಬೆದರಿಕೆಗೆ ನಾವು ಜಗ್ಗುವುದಿಲ್ಲ ಎಂದು ವಾರ್ನಿಂಗ್ ನೀಡಿದ್ದಾರೆ.
ಅಮೆರಿಕ ದಾಳಿ ಆರಂಭಿಸಿರದಿದ್ದರೆ, ಟೆಹ್ರಾನ್‌ನಿಂದಲೇ ದಾಳಿ ಆರಂಭ ಆಗುತ್ತಿತ್ತು.ಅವರು ದಾಳಿಗೆ ಸಿದ್ಧವಾಗಿದ್ದರು. ಯಾರೂ ಊಹಿಸದಷ್ಟು ಕ್ಷಿಪಣಿ ಅವರು ಸಿದ್ಧವಾಗಿಟ್ಟುಕೊಂಡಿದ್ದರು. ಮಧ್ಯಪ್ರಾಚ್ಯ ದೇಶದ ಮೇಲೆಲ್ಲ ಹಾಗೂ ಇಸ್ರೇಲ್ ಮೇಲೆಯೂ ದಾಳಿ ಮಾಡುತ್ತಿದ್ದರು. ಪರಮಾಣು ಶಸ್ತ್ರಾಸ್ತ್ರ ಇದ್ದಿದ್ದರೆ ಅದನ್ನು ಇಸ್ರೇಲ್ ಮೇಲೆ ಪ್ರಯೋಗಿಸುತ್ತಿದ್ದರು. ಈಗ ಶೇ.80ರಷ್ಟು ಕ್ಷಿಪಣಿ, ಉಡಾವಣೆಯ ಶಶ್ತ್ರಾಸ್ತ್ರಗಳನ್ನು ನಾಶಪಡಿಸಿದ್ದೇವೆ. ಕೆಲವೇ ಸಿಡಿತಲೆಗಳನ್ನು ಅವರು ಹೊಂದಿದ್ದಾರಷ್ಟೆ. ನಮ್ಮ ಮಿಲಿಟರಿ ಅದ್ಭುತವಾಗಿ ಕೆಲಸ ಮಾಡಿದೆ ಎಂದಿದ್ದಾರೆ.
ತೈಲಾಗಾರಗಳ ಮೇಲಿನ ದಾಳಿಗೆ ಅಸಮಾಧಾನ
ಸ್ನೇಹಿತ ರಾಷ್ಟ್ರಗಳಾದ ಅಮೆರಿಕ ಮತ್ತು ಇಸ್ರೇಲ್ ಮಧ್ಯೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಇರಾನ್‌ನ 30 ತೈಲ ಘಟಕಗಳ ಮೇಲೆ ಇಸ್ರೇಲ್ ದಾಳಿ ಮಾಡಿತ್ತು. ಇಸ್ರೇಲಿನ ಈ ನಡೆಯನ್ನು ಅಮೆರಿಕ ಆಕ್ಷೇಪಿಸಿದೆ.
ಇಸ್ರೇಲಿನ ಈ ವಿಧ್ವಂಸಕ ದಾಳಿಗಳು ತೈಲ ಬೆಲೆಯನ್ನು ಹೆಚ್ಚಾಗುವಂತೆ ಮಾಡುವ ಜೊತೆಗೆ ಇರಾನ್ ಸಾರ್ವಜನಿಕರು ಅಲ್ಲಿನ ಸರ್ಕಾರಕ್ಕೆ ಬೆಂಬಲ ನೀಡುವಂತೆ ಮಾಡುವ ಸಾಧ್ಯತೆಗಳಿವೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಇದು ಮಿತ್ರರ ನಡುವೆ ಸಣ್ಣಮಟ್ಟದಲ್ಲಿ ಭಿನ್ನತೆಗೆ ಕಾರಣವಾಗಿದೆ. ಇರಾನ್ ರಾಜಧಾನಿಯ ಬಳಿಯ ಹಲವಾರು ತೈಲ ಸಂಗ್ರಹಾಗಾರಗಳು ಮತ್ತು ಪೆಟ್ರೋಲಿಯಂ ವಿತರಣಾ ತಾಣಗಳ ಮೇಲೆ ನಡೆಸಿದ ದಾಳಿಯಿಂದ ದೊಡ್ಡ ಬೆಂಕಿ ಹೊತ್ತಿಕೊಂಡಿದ್ದು ಮತ್ತು ನಗರದ ಕೆಲವು ಭಾಗಗಳಲ್ಲಿ ದಟ್ಟ ಹೊಗೆ ಹರಡಿದೆ.
ಟೆಹ್ರಾನ್‌ನ ಮಿಲಿಟರಿ ಸಾಮರ್ಥ್ಯಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ತನ್ನ ದಾಳಿಯನ್ನು ಸಮರ್ಥಿಸಿಕೊಂಡಿದೆ.
























