ಯುದ್ಧದಿಂದಾಗಿ ಗ್ಯಾಸ್ ಸಿಗುವುದಿಲ್ಲ ಎಂಬ ಆತಂಕದಿಂದ ಸಿಲಿಂಡರ್ ಸಂಗ್ರಹಿಸಲು ಮುಂದಾದ ಜನ
ನವದೆಹಲಿ : ಇಸ್ರೇಲ್, ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧದಿಂದ ದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ. ಇದರ ಬೆನ್ನಲ್ಲೇ ಕರ್ನಾಟಕ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಮತ್ತು ಗೃಹ ಬಳಕೆಯ ಎಲ್‌ಪಿಜಿ ಸರಬರಾಜಿನ ಮೇಲೆ ಪರಿಣಾಮ ಬೀರಿದ್ದು, ಗ್ಯಾಸ್ ಸಿಲಿಂಡರ್ ಅಭಾವ ತಲೆದೋರಿದೆ. ಬೆಂಗಳೂರು, ತಮಿಳುನಾಡು ಸೇರಿದಂತೆ ವಿವಿಧ ನಗರಗಳಲ್ಲಿ ಗ್ಯಾಸ್ ಅಭಾವದಿಂದ ಹೋಟೆಲ್‌ಗಳನ್ನು ಬಂದ್ ಮಾಡುವ ಪರಿಸ್ಥಿತಿ ಬಂದಿದೆ.
ಈ ಹಿನ್ನೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೃತಕ ಅಭಾವ ಮತ್ತು ಕಾಳಸಂತೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಈಗ ಕಠಿಣ ಕ್ರಮಗಳಿಗೆ ಮುಂದಾಗಿದೆ. ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಗ್ಯಾಸ್ ಸಿಲಿಂಡರ್‌ಗಳ ದಾಸ್ತಾನು ಮಾಡುವುದನ್ನು ತಡೆಯಲು ಎರಡು ಬುಕ್ಕಿಂಗ್‌ಗಳ ನಡುವಿನ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ.
ಈ ಹಿಂದೆ 55 ದಿನಗಳಿಗೊಮ್ಮೆ ಸಿಲಿಂಡರ್ ಬುಕ್ ಮಾಡುತ್ತಿದ್ದವರು ಈಗ ಯುದ್ಧದ ಭೀತಿಯಿಂದ ಕೇವಲ 15 ದಿನಗಳಲ್ಲೇ ಬುಕ್ಕಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಇದನ್ನು ನಿಯಂತ್ರಿಸಲು ಹೊಸ ನಿಯಮ ಜಾರಿಗೆ ತರಲಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗಿಂತ ಮನೆ ಬಳಕೆಯ ಗ್ರಾಹಕರಿಗೆ ಮೊದಲ ಆದ್ಯತೆ ನೀಡುವಂತೆ ಸರ್ಕಾರ ಸೂಚನೆ ನೀಡಿದೆ. ಮನೆ ಬಳಕೆಯ ಗ್ರಾಹಕರ ಹಿತವೇ ನಮಗೆ ಮುಖ್ಯ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ದೇಶೀಯ ರಿಫೈನರಿಗಳಿಗೆ ಎಲ್‌ಪಿಜಿ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವಂತೆ ಸರ್ಕಾರ ಆದೇಶಿಸಿದೆ. ಗ್ಯಾಸ್ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಹೊಸ ದೇಶಗಳೊಂದಿಗೆ ಸರ್ಕಾರ ಮಾತುಕತೆ ನಡೆಸುತ್ತಿದೆ. ಅಲ್ಜೀರಿಯಾ, ಆಸ್ಟ್ರೇಲಿಯಾ, ಕೆನಡಾ ಮತ್ತು ನಾರ್ವೆ ದೇಶಗಳು ಭಾರತಕ್ಕೆ ಎಲ್‌ಪಿಜಿ ಮಾರಾಟ ಮಾಡಲು ಮುಂದೆ ಬಂದಿವೆ ಎಂದು ಮೂಲಗಳು ತಿಳಿಸಿವೆ.
ಏಕಾಏಕಿ ಗ್ಯಾಸ್ ಸರಬಾರದು ನಿಂತಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಅನಿವಾರ್ಯವಾಗಿ ಬಂದ್ ಮಾಡಬೇಕಾದ ಪರಿಸ್ಥಿತಿ ಎಂದು ಹೊಟೆಲ್ ಮಾಲೀಕರ ಸಂಘ ಎಚ್ಚರಿಸಿದೆ.
ಬೆಂಗಳೂರು ಹೋಟೆಲ್ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ಕೃಷ್ಣರಾಜ್ ಈ ಕುರಿತು ಪ್ರತಿಕ್ರಿಯಿಸಿಇದು ನಮ್ಮ ನಿರ್ಧಾರ ಅಲ್ಲ ಸರ್ಕಾರ ನಮ್ಮ ಮೇಲೆ ಹಾಕುತ್ತಿರುವ ಒತ್ತಡ ಎಂದಿದ್ದಾರೆ. ಮೊದಲೇ ನಮಗೆ ಮುನ್ಸೂಚನೆ ನೀಡಿದರೆ ಈ ರೀತಿಯ ಪರಿಸ್ಥಿತಿ ಎದುರಿಸುವ ಪ್ರಮೇಯ ಇರುತ್ತಿರಲಿಲ್ಲ. ನಾವು ಬಂದ್ ಮಾಡುವ ನಿರ್ಧಾರ ತೆಗೆದುಕೊಂಡಿಲ್ಲ. ನಮಗೆ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ ಎಂದಿದ್ದಾರೆ.
ದಿಢೀರ್ ಪೂರೈಕೆ ಸ್ಥಗಿತಗೊಂಡರೆ ನಾವು ಬಂದ್ ಮಾಡದೇ ಬೇರೆ ದಾರಿ ಇಲ್ಲ. ಹೊಟೆಲ್ ಮಾಲೀಕರ ಸಂಘ ಯಾವುದೇ ಬಂದ್‌ಗೆ ಕರೆ ಕೊಟ್ಟಿಲ್ಲ. ಆದರೆ ಆಹಾರ, ತಿನಿಸುಗಳು ಇಲ್ಲದಿದ್ದರೆ ಬಂದ್ ಮಾಡಲೇಬೇಕು. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಚೆನ್ನೈ ಹೋಟೆಲ್ ಅಸೋಸಿಯೇಷನ್ ತಮಿಳುನಾಡು ಸಿಎಂಗೆ ಪತ್ರ ಬರೆದು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದೆ. ಸಿಲಿಂಡರ್ ಸಿಗದೆ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ವಿತರಕರು ಸಿಲಿಂಡರ್ ಪೂರೈಕೆ ಸಂಪೂರ್ಣ ಸ್ಥಗಿತ ಮಾಡಿದ್ದಾರೆ. ನೋ ಸ್ಟಾಕ್ ಎಂದು ಹೇಳುತ್ತಿದ್ದಾರೆ. ಬಹುತೇಕ ರೆಸ್ಟೋರೆಂಟ್ ಬಂದ್ ಮಾಡುವ ಪರಿಸ್ಥಿತಿ ಬಂದಿದೆ ಎಂದು ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.
























