ಮಧುರೈ: ಪ್ರಕರಣವೊಂದಕ್ಕೆ ಸಂಬಂಧಿಸಿದ ಹಾಗೆ ವಿಚಾರಣೆಗಾಗಿ ಪೊಲೀಸರ ಕಸ್ಟಡಿಯಲ್ಲಿದ್ದ ದಲಿತ ಯುವಕನೊಬ್ಬ ಮೃತಪಟ್ಟಿದ್ದು, ಪೊಲೀಸರ ಚಿತ್ರಹಿಂಸೆಯಿಂದ ಈ ಘಟನೆ ನಡೆದಿದೆ ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತನನ್ನು ಆಕಾಶ್ (26) ಎಂದು ಗುರುತಿಸಲಾಗಿದೆ. ಶಿವಗಂಗಾದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಈತನನ್ನು ಪೊಲೀಸರು ಬಂಧಿಸಿದ್ದರು.
ಈ ಬಗ್ಗೆ ಆಕಾಶ್ ತಂದೆ ಮಾತನಾಡಿದ್ದು, ಸ್ನೇಹಿತರ ನಡುವೆ ಜಗಳ ನಡೆದಿದ್ದು, ಈ ಪ್ರಕರಣದಲ್ಲಿ ಆಕಾಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ವಶಕ್ಕೆ ಪಡೆದಿದ್ದ ನನ್ನ ಪುತ್ರನನ್ನು ಪೊಲೀಸರು ಠಾಣೆಗೆ ಕರೆತಂದಿಲ್ಲ. ಆತನ ಜೊತೆಗೆಯೇ ಬಂಧಿಸಿದ್ದ ಮತ್ತೊಬ್ಬನನ್ನು ಮಾತ್ರ ಠಾಣೆಗೆ ಕರೆತಂದಿದ್ದರು. ನಮ್ಮ ಮಗನ ಬಗ್ಗೆ ನಮಗೆ ಯಾವ ಮಾಹಿತಿಯನ್ನು ಸಹ ನೀಡಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಹಾಗೆಯೇ ಆಕಾಶ್‌ನನ್ನು ಶಿವ ಗಂಗಾಗೆ ಕರೆದೊಯ್ದು, ಅಲ್ಲಿ ಆತನ ಕಾಲುಗಳ ಮೇಲೆ ಕಲ್ಲುಗಳನ್ನಿಟ್ಟು ಹಲ್ಲೆ ಮಾಡಿ, ಕಾಲು ಮುರಿದು ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾಗಿಯೂ ಆತನ ತಂದೆ ಆರೋಪಿಸಿದ್ದಾರೆ. ಈ ಘಟನೆಗಳ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಆದರೆ ಹೆಚ್ಚಿನ ಚಿಕಿತ್ಸಾ ಹಿನ್ನೆಲೆ ಆತನನ್ನು ಮಧುರೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ಅಲ್ಲಿಗೆ ನಾವು ತೆರಳಿ ಮಗನನ್ನು ನೋಡಿದಾಗ ಪೊಲೀಸರು ಜಾತಿ ನಿಂದನೆ ಮಾಡಿ ಆತನಿಗೆ ನೀಡಿದ ಚಿತ್ರಹಿಂಸೆಯ ಬಗ್ಗೆ ಹೇಳಿದ್ದಾನೆ ಎಂದು ಅಳಲು ತೋಡಿಕೊಂಡಿದ್ದಾರೆ.
ಹಾಗೆಯೇ ನಮ್ಮ ಮಗನ ಸಾವಿಗೆ ಕಾರಣರಾದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಸ್‌ಸಿಎಸ್‌ಟಿ ದೌರ್ಜನ್ಯ ಕಾಯಿದೆಯಡಿ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
























