ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷವಾದ ಹಿನ್ನೆಲೆಯಲ್ಲಿ ಡಿನ್ನರ್
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಶಾಸಕರಿಗಾಗಿ ಏರ್ಪಡಿಸಿರುವ ಔತಣಕೂಟ ನಾನಾ ಕಾರಣಗಳಿಗಾಗಿ ಕುತೂಹಲ ಹುಟ್ಟಿಸಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಇಂದಿಗೆ ಡಿ.ಕೆ ಶಿವಕುಮಾರ್ 6 ವರ್ಷ ಪೂರೈಸಿದ್ದು, ಈ ಸಂಭ್ರಮಾಚರಣೆಗಾಗಿ ಪಕ್ಷದ ಶಾಸಕರಿಗೆ ಔತಣಕೂಟ ಆಯೋಜಿಸಿದ್ದಾರೆ ಎನ್ನಲಾಗಿದ್ದರೂ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಕುರ್ಚಿಗಾಗಿ ಈಗಲೂ ಶೀತಲ ಸಮರ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಈ ಔತಣಕೂಟಕ್ಕೆ ಮಹತ್ವ ಬಂದಿದೆ.
ಇಂದಿನ ಔತಣಕೂಟದಲ್ಲಿ ಮಹತ್ವದ ಘೋಷಣೆ ಅಥವಾ ಸ್ಪಷ್ಟ ಸಂದೇಶ ರವಾನೆಗೆ ಡಿಕೆಶಿ ಮುಂದಾಗುವ ಸಾಧ್ಯತೆ ಇದೆ. ರಾಜಕೀಯ ಲೆಕ್ಕಾಚಾರ, ಪವರ್ ಶೇರಿಂಗ್ ಗೊಂದಲದ ನಡುವೆ ಡಿಸಿಎಂ ಡಿನ್ನರ್ ಕೂಟ ಸಾಕಷ್ಟು ಕುತೂಹಲ ಮೂಡಿಸಿದೆ. ಸಹಜವಾಗಿಯೇ ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷದ ಪೂರೈಕೆ ಜೊತೆ ಜೊತೆಗೆ ಸಾಕಷ್ಟು ಚರ್ಚೆಗೂ ಕಾರಣವಾಗಿದೆ.
ಔತಣಕೂಟಕ್ಕೆ ಯಾರೆಲ್ಲ ಬರುತ್ತಾರೆ, ಏನೆಲ್ಲ ಚರ್ಚೆಯಾಗಬಹುದು ಎಂಬ ವಿಚಾರವಾಗಿ ಮಾತುಕತೆಗಳು ನಡೆಯುತ್ತಿದ್ದು, ಇಂದಿನ ಔತಣಕೂಟ ಕುರ್ಚಿ ಕಿತ್ತಾಟವನ್ನು ಇನ್ನೊಂದು ಆಯಾಮದತ್ತ ಒಯ್ಯುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಕೆಲವು ದಿನದ ಹಿಂದೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಇಳಿಯುವ ಬಗ್ಗೆಯೂ ಡಿಕೆಶಿ ಮಾತನಾಡಿದ್ದರು. ಈ ಎಲ್ಲ ಬೆಳವಣಿಗೆ ನಡುವೆ ಡಿಸಿಎಂ ಡಿಕೆಶಿ ಔತಣಕೂಟದ ಬಗ್ಗೆ ಸಾಕಷ್ಟು ಕುತೂಹಲ ಹೆಚ್ಚಿದೆ. ಡಿಸಿಎಂ ಡಿಕೆಶಿ ಇಂದಿನ ಡಿನ್ನರ್ ಮೀಟಿಂಗ್ ಜೊತೆ ಮಹತ್ವದ ಘೋಷಣೆ ಏನಾದರೂ ಮಾಡ್ತಾರಾ ಎಂಬ ಕುತೂಹಲ ಇದೆ.
ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ನಾನು ಕೆಪಿಸಿಸಿ ಅಧ್ಯಕ್ಷನಾಗಿ 6 ವರ್ಷ ಪೂರ್ಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಭೋಜನಕೂಟ ಹಮ್ಮಿಕೊಂಡಿದ್ದೇನೆ. ಮತ್ತೊಂದು ದಿನ ನಮ್ಮ ಪರಾಜಿತ ಅಭ್ಯರ್ಥಿಗಳು ಮತ್ತು ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಭೋಜನಕೂಟ ಹಮ್ಮಿಕೊಳ್ಳಲಾಗುವುದು. ಈಗ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ಭೋಜನಕೂಟ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
























