ಬಂಟ್ವಾಳ : ಹೋಟೆಲ್ ಎದುರು ನಿಲ್ಲಿಸಿದ್ದ ಬಸ್ಸಿನಿಂದ ದಂಪತಿಯ ಲಕ್ಷಾಂತರ ಮೌಲ್ಯದ ಆಭರಣಗಳನ್ನು ಕಳವು ಮಾಡಿದ್ದ ಆರೋಪಿ ಐದು ತಿಂಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಧ್ಯಪ್ರದೇಶದ ನಿವಾಸಿ ಸಮದ್ ಖಾನ್ (37) ಎಂಬಾತ ಆರೋಪಿ. ಅವನಿಂದ ಕಳವು ಮಾಡಿದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಳೆದ ನವೆಂಬರ್ 19ರಂದು ದುರ್ಗಾಂಬಾ ಬಸ್ ಕಲ್ಲಡ್ಕ ಸಮೀಪ ಕುದ್ರಬೆಟ್ಟುವಿನಲ್ಲಿರುವ ಸಮುದ್ರ ಹೋಟೆಲ್ ಎದುರು ಪ್ರಯಾಣಿಕರಿಗೆ ಉಪಾಹಾರ ಸೇವಿಸಲೆಂದು ನಿಲ್ಲಿಸಿದ್ದ ವೇಳೆ ಬವ್ರಹ್ಮಾವರ ಮೂಲದ ದಂಪತಿಯ ಬ್ಯಾಗಿನಲ್ಲಿದ್ದ ಸುಮಾರು 20 ಲ.ರೂ. ಮೌಲ್ಯದ 180 ಗ್ರಾಂ ಚಿನ್ನಾಭರಣ ಕಳ್ಳತನವಾಗಿತ್ತು. ಈ ಕುರಿತು ದಂಪತಿ ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದರು.
ಈ ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು ಮಧ್ಯಪ್ರದೇಶ ಮೂಲದ ಆರೋಪಿಯನ್ನು ಬಂಧಿಸಿ ಆತನಿಂದ ಎಲ್ಲ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ.
























