ಸಹೋದರಿಯ ಸಾವಿನ ದುಃಖದ ನಡುವೆ ಆಡಿ ಭಾರತವನ್ನು ಗೆಲ್ಲಿಸಿದ ಇಶಾನ್‌ ಕಿಶನ್‌

ಅಕ್ಕ, ಬಾವ ಅಪಘಾತಕ್ಕೆ ಬಲಿಯಾಗಿದ್ದರೂ ನೋವು ನುಂಗಿ ಅಮೋಘವಾಗಿ ಆಡಿದ ಇಶಾನ್‌ ಕಿಶನ್‌

ಅಹ್ಮದಾಬಾದ್‌: ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವಿರುದ್ಧ ಟೀಮ್ ಇಂಡಿಯಾ 96 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಆದರೆ ಈ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಆಟಗಾರ ಇಶಾನ್‌ ಕಿಶನ್‌ ಸಹೋದರಿಯ ಸಾವಿನ ದುಃಖದಲ್ಲೇ ಆಡಿದ್ದರು ಎಂಬ ವಿಚಾರ ಈಗ ಗೊತ್ತಾಗಿದೆ. ಪಂದ್ಯದ ಮುನ್ನಾದಿನವೇ ಅವರ ಸಹೋದರಿ ಮತ್ತು ಬಾವ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದರು.

ಗೆಲುವಿನ ಬಳಿಕ ಮಾತನಾಡಿದ ಇಶಾನ್ ಕಿಶನ್, ತಮ್ಮ ಜೀವನದ ಅತ್ಯಂತ ಕಠಿಣ ಕ್ಷಣವೊಂದನ್ನು ಹಂಚಿಕೊಂಡಿದ್ದಾರೆ. ಫೈನಲ್​ ಮ್ಯಾಚ್​ಗೂ ಮುನ್ನ ನನ್ನ ಸಹೋದರಿ ತೀರಿಕೊಂಡಿದ್ದಾರೆ. ಅವಳಿಗೆ ನಾನು ವಿಶ್ವಕಪ್ ಗೆಲ್ಲಬೇಕೆಂಬ ತುಂಬಾ ಆಸೆಯಿತ್ತು. ಆದರೆ ಇದೀಗ ಅವಳಿಲ್ಲ. ಈ ವಿಶ್ವಕಪ್ ನಾನು ಅವಳಿಗಾಗಿ ಅರ್ಪಿಸುತ್ತೇನೆ ಎಂದು ಇಶಾನ್ ಕಿಶನ್ ಸಂತಸದ ಕ್ಷಣಗಳ ನಡುವೆ ನೋವನ್ನು ಹಂಚಿಕೊಂಡಿದ್ದಾರೆ.





















































 
 

ಮಾರ್ಚ್ 7ರಂದು ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೆದ್ದಾರಿ 27 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಶಾನ್ ಕಿಶನ್ ಅವರ ಕಸಿನ್ ಸಿಸ್ಟರ್ ವೈಷ್ಣವಿ ಸಿಂಗ್ ಮತ್ತು ಅವರ ಪತಿ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಈ ದಂಪತಿಯ ಆರು ತಿಂಗಳು ಮತ್ತು ಮೂರು ವರ್ಷದ ಇಬ್ಬರು ಪುಟ್ಟ ಮಕ್ಕಳು ಅದೃಷ್ಟವಶಾತ್ ಪಾರಾಗಿದ್ದಾರೆ.

ಕುಟುಂಬದಲ್ಲಿ ಇಂತಹ ದೊಡ್ಡ ದುರಂತ ಸಂಭವಿಸಿದರೂ, ಇಶಾನ್ ಕಿಶನ್ ತಂಡದ ಹಿತದೃಷ್ಟಿಯಿಂದ ಫೈನಲ್ ಪಂದ್ಯವನ್ನು ಆಡಲು ನಿರ್ಧರಿಸಿದರು. ಸಹ ಆಟಗಾರ ಹಾರ್ದಿಕ್ ಪಾಂಡ್ಯ ಅವರು ನೀಡಿದ ಧೈರ್ಯದಿಂದಾಗಿ ಅವರು ಮೈದಾನಕ್ಕಿಳಿದರು. ವೈಯಕ್ತಿಕ ದುಃಖದ ನಡುವೆಯೂ ಇಶಾನ್ ಕಿಶನ್ ಸ್ಫೋಟಕವಾಗಿ ಬ್ಯಾಟ್ ಬೀಸಿ 25 ಎಸೆತಗಳಲ್ಲಿ 54 ರನ್ (4 ಬೌಂಡರಿ, 4 ಸಿಕ್ಸರ್) ಗಳಿಸಿದರು. ಅಲ್ಲದೆ ಫೀಲ್ಡಿಂಗ್‌ನಲ್ಲಿ ಮೂರು ಅದ್ಭುತ ಕ್ಯಾಚ್‌ಗಳನ್ನು ಹಿಡಿದರು. ಈ ಮೂಲಕ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದರು.

ಈ ಗೆಲುವನ್ನು ನನ್ನ ಸಹೋದರಿಗೆ ಅರ್ಪಿಸುತ್ತೇನೆ. ಅವಳು ನನ್ನ ಈ ಐತಿಹಾಸಿಕ ಕ್ಷಣಗಳನ್ನು ನೋಡಬೇಕೆಂದು ಬಯಸಿದ್ದಳು. ಹೀಗಾಗಿ ಈ ಟ್ರೋಫಿಯನ್ನು ನಾನು ಸಹೋದರಿಗೆ ಅರ್ಪಿಸುವುದಾಗಿ ಇಶಾನ್ ಕಿಶನ್ ಭಾವುಕರಾಗಿ ಹೇಳಿದರು.

error: Content is protected !!
Scroll to Top