ಯಾರೇ ಗೆದ್ದರೂ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಇತಿಹಾಸ ರಚನೆ
ಅಹದಾಬಾದ್: ಟಿ20 ವಿಶ್ವಕಪ್ನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಈ ಅಂತಿಮ ಪಂದ್ಯ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಲು ಕಾತರವಾಗಿದ್ದರೆ, ನ್ಯೂಜಿಲೆಂಡ್ ಚೊಚ್ಚಲ ಟ್ರೋಫಿಗಾಗಿ ಎದುರು ನೋಡುತ್ತಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲವಾದ್ದರಿಂದ ಈ ಪಂದ್ಯ ಟೀಂ ಇಂಡಿಯಾಕ್ಕೆ ಪ್ರತಿಷ್ಠೆಯ ಕಣವೂ ಆಗಿದೆ. ಹೀಗಾಗಿ ಅಜೇಯವಾಗಿ ಉಳಿದಿರುವ ನ್ಯೂಜಿಲೆಂಡ್ ತಂಡವನ್ನು ಮಣಿಸಬೇಕೆಂದರೆ ಟೀಂ ಇಂಡಿಯಾ ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿಯಬೇಕಿದೆ. ಜೊತೆಗೆ ಉತ್ತಮ ರಣತಂತ್ರವನ್ನೂ ರೂಪಿಸಬೇಕಿದೆ.
ದಾಖಲೆಯ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಅತಿಹೆಚ್ಚು ಬಾರಿ ಚಾಂಪಿಯನ್ ಆದ ತಂಡವೆಂಬ ದಾಖಲೆ ಬರೆಯಲು ಟೀಂ ಇಂಡಿಯಾಗೆ ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ. ಟೀಂ ಇಂಡಿಯಾವೇ ಗೆಲ್ಲುವ ಫೇವರಿಟ್ ತಂಡವಾಗಿದ್ದರೂ ಅಭಿಮಾನಿಗಳಿಗೆ 2023ರ ಫೈನಲ್ ಸೋಲು ಆತಂಕವನ್ನುಂಟು ಮಾಡಿದೆ. ಮೋದಿ ಮೈದಾನದಲ್ಲಿ ಭಾರತದ ದಾಖಲೆ ಉತ್ತಮವಾಗಿದ್ದು, ಟ್ರೋಫಿ ಗೆಲ್ಲುವ ಫೇವರೇಟ್ ಎನಿಸಿಕೊಂಡಿದೆ.
ಮೋದಿ ಮೈದಾನದಲ್ಲಿ ಭಾರತ ಇದುವರೆಗೆ ಒಟ್ಟು 10 ಟಿ20 ಪಂದ್ಯಗಳನ್ನು ಆಡಿದೆ. ಅವುಗಳಲ್ಲಿ ಏಳು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಮೂರು ಪಂದ್ಯಗಳಲ್ಲಿ ಸೋತಿದೆ. ಹಾಗೆಯೇ 2021ರಿಂದ ಈ ಕ್ರೀಡಾಂಗಣದಲ್ಲಿ ಭಾರತ ತಂಡ ಕೇವಲ ಮೂರು ಪಂದ್ಯಗಳಲ್ಲಿ ಸೋತಿದೆ. ಇದರ ಜೊತೆಗೆ ಈ ಟಿ20 ವಿಶ್ವಕಪ್ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ ಆರು ಪಂದ್ಯಗಳು ನಡೆದಿವೆ.
ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಬೆನ್ನಟ್ಟಿದ ತಂಡಗಳು ಎರಡರಲ್ಲಿ ಗೆದ್ದಿವೆ. ಉಳಿದಂತೆ ಒಂದು ಪಂದ್ಯ ಟೈ ಆಗಿತ್ತು. ಈ ಮೈದಾನದಲ್ಲಿ ಎರಡು ಪಂದ್ಯಗಳನ್ನು ಆಡಿರುವ ಕಿವೀಸ್ ಎರಡರಲ್ಲೂ ಸೋಲು ಕಂಡಿದೆ. ಹೀಗಾಗಿ ಮೋದಿ ಮೈದಾನದಲ್ಲಿ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾಗೆ ಅಂಕಿ ಅಂಶಗಳು ಪೂರಕವಾಗಿವೆ.
ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಎಲ್ಲರೂ ಅದ್ಭುತ ಫಾರ್ಮ್ನಲ್ಲಿದ್ದಾರೆ. ಆರಂಭಿಕನಾಗಿ ಸಂಜು ಸ್ಯಾಮ್ಸನ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬರುವ ಇಶಾನ್ ಕಿಶನ್ ಕೂಡ ಇಡೀ ಪಂದ್ಯಾವಳಿಯಲ್ಲಿ ಅತ್ಯಧಿಕ ರನ್ ಕಲೆಹಾಕಿರುವ ಆಟಗಾರನಾಗಿದ್ದಾರೆ. ಆ ನಂತರ ಬರುವ ನಾಯಕ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಕೂಡ ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ. ಶಿವಂ ದುಬೆ, ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ತಮ್ಮ ಆಲ್ರೌಂಡರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ಆದರೆ ಟೀಂ ಇಂಡಿಯಾಕ್ಕೆ ದೊಡ್ಡ ತಲೆನೋವಾಗಿರುವುದು ಆರಂಭಿಕ ಅಭಿಷೇಕ್ ಶರ್ಮಾ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ರನ್ಗಳ ಮಳೆ ಹರಿಸಿದ್ದ ಅಭಿಷೇಕ್, ಟಿ20 ವಿಶ್ವಕಪ್ ಆರಂಭದ ಬಳಿಕ ಕಳಪೆ ಫಾರ್ಮ್ಗೆ ಸಿಲುಕಿ ನರಳುತ್ತಿದ್ದಾರೆ. ಇಡೀ ಪಂದ್ಯಾವಳಿಯಲ್ಲಿ ಅಭಿಷೇಕ್ರಿಂದ ಕೇವಲ ಒಂದು ಅರ್ಧಶತಕ ಮಾತ್ರ ಸಿಡಿದಿದೆ. ಉಳಿದಂತೆ ಮೂರು ಪಂದ್ಯಗಳಲ್ಲಿ ಅಭಿಷೇಕ್ಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಇದೆಲ್ಲ ಸಾಲದೆಂಬಂತೆ ಸೆಮಿಫೈನಲ್ ಪಂದ್ಯದಲ್ಲೂ ಅಭಿಷೇಕ್ ತಮ್ಮ ಫಾರ್ಮ್ ಕಂಡುಕೊಳ್ಳಲಿಲ್ಲ. ಹೀಗಾಗಿ ಅವರನ್ನು ತಂಡದಿಂದ ಹೊರಗಿಡಬೇಕೆಂಬ ಕೂಗು ಜೋರಾಗಿದೆ. ಆದರೆ ಫೈನಲ್ ದೃಷ್ಟಿಯಿಂದ ಅಭಿಷೇಕ್ರನ್ನು ಹೊರಗಿಡುವ ಸಾಹಸಕ್ಕೆ ಆಯ್ಕೆ ಮಂಡಳಿ ಕೈಹಾಕುವ ಸಾಧ್ಯತೆಗಳಿಲ್ಲ.
ಬೌಲಿಂಗ್ ವಿಭಾಗದಲ್ಲೂ ಬೌಲರ್ಗಳು ಕೊಂಚ ದುಬಾರಿಯಾದರೂ ಸಂದರ್ಭಕ್ಕೆ ಅನುಸಾರವಾಗಿ ತಂಡಕ್ಕೆ ನೆರವಾಗುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹೀಗಾಗಿ ವೇಗದ ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಅಂದರೆ ಜಸ್ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ಈ ವಿಭಾಗವನ್ನು ಮುನ್ನಡೆಸಲಿದ್ದಾರೆ. ಆದರೆ ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿ ದುಬಾರಿಯಾಗುತ್ತಿರುವುದು ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಅಭಿಷೇಕ್ ಶರ್ಮಾ ಜೊತೆಗೆ ವರುಣ್ ಚಕ್ರವರ್ತಿಯನ್ನು ಹೊರಗಿಟ್ಟು, ಅವರ ಬದಲಿಗೆ ಕುಲದೀಪ್ ಯಾದವ್ಗೆ ಅವಕಾಶ ನೀಡಬೇಕೆಂಬ ಕೂಗು ಜೋರಾಗಿದೆ. ಆದರೆ ಕೊನೆಯ ಪಂದ್ಯದಿಂದ ವರುಣ್ರನ್ನು ಹೊರಗಿಡುವ ಸಾಧ್ಯತೆಗಳಿಲ್ಲ. ಇದರರ್ಥ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ.
ಉಭಯ ತಂಡಗಳು
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್.
ನ್ಯೂಜಿಲೆಂಡ್ ತಂಡ: ಫಿನ್ ಅಲೆನ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಮೈಕೆಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೈಲ್ ಜೇಮಿಸನ್, ಇಶ್ ಸೋಧಿ, ಲಾಕಿ ಫರ್ಗುಸನ್, ಜಾಕೋಬ್ ಡಫಿ, ಜೇಮ್ಸ್ ನೀಶಮ್, ಮ್ಯಾಟ್ ಹೆನ್ರಿ, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್.
























