ಏಳು ವಿದ್ಯಾರ್ಥಿಗಳು, ವಾರ್ಡನ್ಗೆ ಗಂಭೀರ ಗಾಯ ; ರಾಜ್ಯವನ್ನು ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆ
ಬಳ್ಳಾರಿ: ಒಂಬತ್ತನೇ ತರಗತಿ ವಿದ್ಯಾರ್ಥಿ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ ತನ್ನ ಸಹಪಾಠಿಯನ್ನು ಕೊಂದು, ಇತರ ಏಳು ವಿದ್ಯಾರ್ಥಿಗಳು ಮತ್ತು ಹಾಸ್ಟೆಲ್ ವಾರ್ಡನ್ನನ್ನು ಗಾಯಗೊಳಿಸಿದ ಬೆಚ್ಚಿಬೀಳಿಸುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ನಗರದ ಹೊರವಲಯದ ಖಾಸಗಿ ಗುರುಕುಲ ಶಾಲೆಯ ಹಾಸ್ಟೆಲ್ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಕಬ್ಬಿಣದ ರಾಡ್ನಿಂದ ಬಲವಾದ ಪೆಟ್ಟು ಬಿದ್ದು ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಹಾಸ್ಟೆಲ್ ವಾರ್ಡನ್ ಮೇಲೆಯೂ ಬಾಲಕ ಹಲ್ಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಭಯಾನಕ ಹತ್ಯೆಯಲ್ಲಿ ಅಂತ್ಯವಾಗಿದೆ. ಜಗಳ ಬಿಡಿಸಲು ಬಂದ ವಾರ್ಡನ್ ಮೇಲೂ ಹಲ್ಲೆಯಾಗಿದೆ. ಒಂಬತ್ತನೇ ತರಗತಿ ವಿದ್ಯಾರ್ಥಿ ಕಬ್ಬಿಣದ ರಾಡ್ ಎತ್ತಿಕೊಂಡು ಮನಬಂದಂತೆ ಹಲ್ಲೆ ಮಾಡಿದ್ದಾನೆ. ರಾಡ್ ಏಟಿಗೆ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವಿಗೀಡಾಗಿದ್ದು, ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲರೂ 9ನೇ ತರಗತಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಮೃತ ಬಾಲಕನ ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ. ಡ್ರಗ್ ಅಡಿಕ್ಟ್ ಆಗಿ ಕೊಲೆ ಮಾಡಿರಬಹುದು ಎಂದು ಮೃತ ಬಾಲಕನ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಶಾಲಾ ಆಡಳಿತ ಮಂಡಳಿಯೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.
ರಾಡ್ನಿಂದ ಹೊಡೆದಿದ್ದಾನೆ ಎಂದು ಶಾಲಾ ಆಡಳಿತ ಮಂಡಳಿ ಹೇಳುತ್ತಿದೆ. ಆದರೆ, ಚಾಕುವಿನಿಂದ ಚುಚ್ಚಿರುವ ಅನುಮಾನ ಇದೆ. ಇಷ್ಟೊಂದು ಭಯಾನಕವಾಗಿ ಅಷ್ಟೂ ಜನರ ಮೇಲೆ ಹಲ್ಲೆ ಮಾಡೋದಕ್ಕೆ ಹೇಗೆ ಸಾಧ್ಯ? ಆರೋಪಿ ಬಾಲಕ ಡ್ರಗ್ ಅಡಿಕ್ಟ್ ಆಗಿರಬಹುದು ಎಂದು ಆರೋಪ ಮಾಡಿದ್ದಾರೆ. ಬಳ್ಳಾರಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
























