ಪೊಲೀಸರಿಂದ ತಪ್ಪಿಸಿಕೊಳ್ಳಲು ಮತಾಂತರವಾಗಿದ್ದ ಕಿಲಾಡಿ
ಮಂಗಳೂರು: ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಕೊಲೆ ಪ್ರಕರಣವೊಂದರ ಆರೋಪಿ, ಕುಖ್ಯಾತ ರೌಡಿಶೀಟರ್‌ನ ಸಹಚರನನ್ನು ಮಂಗಳೂರು ನಗರ ಅಪರಾಧ ಪತ್ತೆ ದಳ ಪೊಲೀಸರು ಬಂಧಿಸಿ ಮುಂದಿನ ತನಿಖೆಗಾಗಿ ಸುರತ್ಕಲ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತನನ್ನು ಬಳ್ಳಾರಿ ಮೂಲದ ಸೂಫೀಯಾನ್ ಹುಸೇನ್ ಅಲಿಯಾಸ್ ಕೊಟ್ರೇಶಿ (31) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಶ್ಯಾಮ ಪುರದ ಬೇಕರಿ ಸಮೀಪ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೂಫೀಯಾನ್ ಕಳೆದ ಹಲವು ವರ್ಷಗಳಿಂದ ಕಲಬುರಗಿ, ಬಳ್ಳಾರಿ, ಮುಂಬೈ ಮತ್ತು ಆಂಧ್ರ ಪ್ರದೇಶದಾದ್ಯಂತ ಅಲೆದಾಡಿ ಅಂತಿಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ. ಈ ಅವಧಿಯಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಹೆಸರನ್ನು ‘ಹುಸೇನ್’ ಎಂದು ಬದಲಾಯಿಸಿಕೊಂಡಿದ್ದ ಆತ, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಮತ್ತು ಚಾಲನಾ ಪರವಾನಗಿಯಂತಹ ಅಧಿಕೃತ ದಾಖಲೆಗಳನ್ನು ಪಡೆದು ಸ್ಥಳೀಯ ಮಹಿಳೆಯೊಬ್ಬರನ್ನು ಮದುವೆಯಾಗಿ ಹೊಸ ಗುರುತಿನೊಂದಿಗೆ ಜೀವನ ನಡೆಸುತ್ತಿದ್ದ.
ವೃದ್ಧೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಕಳವು ಮಾಡಿ ಆಕೆಯನ್ನು ಕೊಲೆಗೈದ ಪ್ರಕರಣದಲ್ಲಿ ಈತ ಈ ಹಿಂದೆ ಜೈಲು ಪಾಲಾಗಿದ್ದ. ಜೈಲಿನಲ್ಲಿದ್ದಾಗ ತನ್ನನ್ನು ಸೂಫೀಯಾನ್ ಎಂದು ಪರಿಚಯಿಸಿಕೊಂಡಿದ್ದ ಈತ, ನಂತರ ಕುಖ್ಯಾತ ರೌಡಿಶೀಟರ್ ಸಫ್ವಾನ್ ಹುಸೈನ್ ಗ್ಯಾಂಗ್ ಸೇರಿಕೊಂಡಿದ್ದ ಎನ್ನಲಾಗಿದೆ.
ಖಚಿತ ಮಾಹಿತಿಯ ಆಧಾರದ ಮೇಲೆ ನಮ್ಮ ತಂಡ ಬೆಂಗಳೂರಿನ ಡಿ.ಜೆ. ಹಳ್ಳಿಯ ರೈಲ್ವೆ ಗೇಟ್ ಬಳಿಯ ಶಾಮಪುರದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಯಶಸ್ವಿಯಾಗಿ ಬಂಧಿಸಿದೆ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೂಫೀಯಾನ್ ವಿರುದ್ಧ ಸುರತ್ಕಲ್, ಬಜ್ಪೆ, ಬಳ್ಳಾರಿ ಮತ್ತು ಹೊಸಪೇಟೆ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕಳ್ಳತನ ಮತ್ತು ದರೋಡೆ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿವೆ.
























