ಕೊಚ್ಚಿ ಬಂದರಿನಲ್ಲಿ ಕೆಲವು ದಿನಗಳಿಂದ ನಿಂತಿರುವ ಯುದ್ಧನೌಕೆ
ನವದೆಹಲಿ: ಇರಾನಿನ ಯುದ್ಧ ನೌಕೆಯನ್ನು ಅಮೆರಿಕ ಮುಳುಗಿಸಿದ ಬೆನ್ನಲ್ಲೇ ಭಾರತ ಇರಾನಿನ ಇನ್ನೊಂದು ಹಡಗನ್ನು ಕೊಚ್ಚಿಯಲ್ಲಿ ತುರ್ತಾಗಿ ನಿಲ್ಲಿಸಲು ಅನುಮತಿ ನೀಡಿದ ವಿಚಾರ ಬೆಳಕಿಗೆ ಬಂದಿದೆ.
ಇರಾನ್ ಯುದ್ಧನೌಕೆ IRIS ದೇನಾವನ್ನು ಅಮೆರಿಕದ ಜಲಾಂತರ್ಗಾಮಿ ನೌಕೆ ಮುಳುಗಿಸುವ ಕೆಲವು ದಿನಗಳ ಮೊದಲು IRIS Lavan ಭಾರತದಲ್ಲಿ ನಿಲ್ಲಿಸಲು ಅನುಮತಿ ಕೇಳಿತು. ಇರಾನಿನ ವಿನಂತಿಯನ್ನು ಸ್ವೀಕರಿಸಿದ ಭಾರತ ಕೊಚ್ಚಿಯಲ್ಲಿ ನಿಲ್ಲಿಸಲು ಅನುಮತಿ ನೀಡಿದೆ.
ಹಡಗಿನಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡು ಬಂದಿದ್ದರಿಂದ ಐಆರ್‌ಐಎಸ್ ಲವನ್ ಫೆ.28ರಂದು ಮನವಿ ಮಾಡಿತ್ತು. ಮಾರ್ಚ್ 1ರಂದು ಹಡಗು ನಿಲ್ಲಿಸಲು ಸರ್ಕಾರ ಅನುಮತಿ ನೀಡಿದ್ದು, ಮಾ.4ರಿಂದ IRIS Lavan ಕೊಚ್ಚಿಯಲ್ಲಿ ಲಂಗರು ಹಾಕಿದೆ. ಹಡಗಿನ 183 ಸಿಬ್ಬಂದಿಗೆ ಪ್ರಸ್ತುತ ಕೊಚ್ಚಿಯಲ್ಲಿರುವ ನೌಕಾ ಸೌಲಭ್ಯಗಳಲ್ಲಿ ವಸತಿ ಕಲ್ಪಿಸಲಾಗಿದೆ.
ಇರಾನಿನ ಯುದ್ಧನೌಕೆ IRIS ದೇನಾವನ್ನು ಮಾ.4ರಂದು ಶ್ರೀಲಂಕಾದ ಕರಾವಳಿಯಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆ ಮುಳುಗಿಸಿತ್ತು. ಭಾರತ ಆಯೋಜಿಸಿದ್ದ ನೌಕಾಪಡೆಗಳ ತಾಲೀಮು ‘ಮಿಲನ್’ನಲ್ಲಿ ಪಾಲ್ಗೊಂಡು ಮರಳುವ ವೇಳೆ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿತ್ತು. ದಾಳಿಯಲ್ಲಿ ಕನಿಷ್ಠ 87 ಇರಾನಿನ ನಾವಿಕರು ಸಾವನ್ನಪ್ಪಿದ್ದಾರೆ.
ಕೊಲ್ಲಿ ಯುದ್ಧದ ಸಮಯದಲ್ಲಿ ಇರಾನಿನ ಮೂರು ಹಡಗುಗಳು ಹಿಂದೂ ಮಹಾಸಗರದಲ್ಲಿ ಸಂಚರಿಸುತ್ತಿದ್ದವು. IRIS ದೇನಾವನ್ನು ಅಮೆರಿಕ ಮುಳುಗಿಸಿದರೆ IRIS Lavan ಕೊಚ್ಚಿಯಲ್ಲಿ ಲಂಗರು ಹಾಕಿದೆ. IRIS ಬುಶೆಹರ್ ಹಡಗಿನಲ್ಲಿ ಇಂಜಿನ್‌ನಲ್ಲಿ ದೋಷ ಕಂಡು ಬಂದಿದ್ದರಿಂದ ಶ್ರೀಲಂಕಾದ ಟ್ರಿಂಕೋಮಲಿಯಲ್ಲಿ ಈಗ ನಿಂತಿದೆ.
























