ಬೆಂಗಳೂರು: ನಾಯಿ ಮೂತ್ರ ವಿಸರ್ಜನೆ ಮಾಡಿದ ವಿಷಯಕ್ಕೆ ಹಿರಿಯ ನಾಗರಿಕರು ಮತ್ತು ಕಿರಿಯರ ನಡುವೆ ನೂಕಾಟ ತಳ್ಳಾಟ ನಡೆದ ಘಟನೆ ವರ್ತೂರಿನ ಬ್ರಿಗೇಡ್ ಯುಟೋಪಿಯಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಅಪಾರ್ಟ್‌ಮೆಂಟಿನಲ್ಲಿ ಹಿರಿಯರಿಗೆಂದೇ ಮೀಸಲಾದ ಪ್ರದೇಶದಲ್ಲಿ ತರುಣ್ ಅರೋರಾ ಎಂಬ ಯುವಕ ನಾಯಿಯನ್ನು ವಾಕಿಂಗ್‌ಗೆ ಕರೆ ತಂದಿದ್ದಾನೆ. ಈ ವೇಳೆ ನಾಯಿ ಮೂತ್ರ ವಿಸರ್ಜನೆ ಮಾಡಿದೆ. ಇದನ್ನು ನೋಡಿದ ಹಿರಿಯರು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಹಿರಿಯರು ಮತ್ತು ತರುಣ್ ನಡುವೆ ನೂಕಾಟ, ತಳ್ಳಾಟ, ಹೊಡೆದಾಟ ನಡೆದಿದೆ.
ಈ ಬಗ್ಗೆ ತರುಣ್ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಿರಿಯರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ತಿಳಿಸಿದ್ದಾರೆ. ಹಿರಿಯ ನಾಗರಿಕರು ಪ್ರತಿ ದೂರು ನೀಡಿದ್ದು, ತರುಣ್ ಅವರೇ ನಮಗೆ ಜೀವ ಬೆದರಿಕೆ ಹಾಕಿದ್ದು ಎಂದು ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
























