ಗದಗ: ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಮೂವರು ಬೈಕ್ ಸವಾರರು ಮೃತಪಟ್ಟ ಘಟನೆ ಮುಂಡರಗಿಯ ಮೇವುಂಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಶಿವಪ್ಪ ಪಾಟ್ಲಿ, ಮುತ್ತಪ್ಪ ಮುದುಗಣ್ಣವರ್, ಆನಂದ ಲಕ್ಷ್ಮೇಶ್ವರಮಠ ಎಂದು ಗುರುತಿಸಲಾಗಿದೆ.
ಒಂದೇ ಬೈಕಿನಲ್ಲಿ ಈ ಮೂವರು ಮುಂಡರಗಿಯಿಂದ ಜಂತ್ಲಿ ಗ್ರಾಮಕ್ಕೆ ಹೋಗುತ್ತಿದ್ದರು. ಕಾರು ಡೋಣಿ ಗ್ರಾಮದಿಂದ ಮುಂಡರಗಿಯತ್ತ ಹೋಗುತ್ತಿತ್ತು. ಬೈಕ್ ಸವಾರರ ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಈ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ. ಅಪಘಾತದ ತೀವ್ರತೆಗೆ ಬೈಕ್ ನಜ್ಜುಗುಜ್ಜಾಗಿದೆ.
ಕಾರು ಚಾಲಕನಿಗೂ ಗಂಭೀರ ಪ್ರಮಾಣದಲ್ಲಿ ಗಾಯಗಳಾಗಿವೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
























