ಸಿಎಂ ಸಿದ್ದರಾಮಯ್ಯ ಅವರ ‘ಬ್ರದರ್ಸ್ ಬಜೆಟ್’ ಬಗ್ಗೆ ಬಿಜೆಪಿ ಟೀಕೆ

ಬೆಂಗಳೂರು: ಸಿ ಎಂ ಸಿದ್ದರಾಮಯ್ಯ ಸರ್ಕಾರದ ಬಜೆಟ್‌ಗೆ ‘ಬ್ರದರ್ಸ್ ಬಜೆಟ್’ ಎಂದು ಕರೆದಿರುವ ಬಿಜೆಪಿ, ಟೀಕೆಗಳ ಸುರಿಮಳೆಯನ್ನೇ ‌ಮಾಡಿದೆ.

ಬಿಜೆಪಿ ನಾಯಕರು ಎಕ್ಸ್ ಖಾತೆಯಲ್ಲಿ ಬಜೆಟ್ ವಿರುದ್ಧ ಟೀಕೆಗಳನ್ನು ಮಾಡಿದ್ದು, ಅಲ್ಪಸಂಖ್ಯಾತರ ಶಾಲೆಗಳನ್ನು ಕೆಪಿಎಸ್‌ ಮಾದರಿಯಲ್ಲಿ ಉನ್ನತೀಕರಣಕ್ಕೆ 1000 ಕೋಟಿ ರೂ., ಅಲ್ಪಸಂಖ್ಯಾತರ ವಸತಿ ಶಾಲೆಗಳ ಆರಂಭ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ, ಅಲ್ಪಸಂಖ್ಯಾತ ಕಾಲೋನಿಗಳ ಮೂಲಸೌಕರ್ಯಕ್ಕೆ ನೂರಾರು ಕೋಟಿ ಮೀಸಲು, ಅಲ್ಪಸಂಖ್ಯಾಂತ ನಿರ್ಗತಿಕರಿಗೆ ಎರಡು ವೃದ್ಧಾಶ್ರಮ ಆರಂಭ, ಅಲ್ಪಸಂಖ್ಯಾಂತ ನಿರುದ್ಯೋಗಿಗಳಿಗೆ 3 ಲಕ್ಷ ರೂ. ವರೆಗೆ ಸಹಾಯಧನ, ಅಲ್ಪಸಂಖ್ಯಾತ ಮಹಿಳೆಯರ ಸ್ವ-ಉದ್ಯೋಗ ಪ್ರೋತ್ಸಾಹಕ್ಕೆ ಸೊಸೈಟಿ ಸ್ಥಾಪನೆ, ಹುಬ್ಬಳ್ಳಿ-ಕಲಬುರಗಿಯಲ್ಲಿ ಹಜ್ ಭವನ ನಿರ್ಮಾಣ, ಅಲ್ಪಸಂಖ್ಯಾತ ನಿಗಮದ ಸಾಲದ ಬಡ್ಡಿ ಮನ್ನಾ, ಅಲ್ಪಸಂಖ್ಯಾತ ಉದ್ಯೋಗಸ್ಥ ಮಹಿಳೆಯರಿಗೆ 4 ಹಾಸ್ಟೆಲ್, ಅಲ್ಪಸಂಖ್ಯಾತ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಗೆ 50 ಸಾವಿರ ರೂ. ವಕ್ಸ್ ಆಸ್ತಿ ಅಭಿವೃದ್ಧಿಗೆ ಹಣ ಮೀಸಲು ಹೀಗೆ ಓಲೈಕೆ ರಾಜಕಾರಣವನ್ನೇ ಪರಮ ಗುರಿಯಾಗಿಸಿಕೊಂಡಿರುವ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್‌ ಉಳಿಸಿಕೊಳ್ಳಲು ರಾಜ್ಯದ ಬೊಕ್ಕಸದ ಬಹುಪಾಲನ್ನೇ ಮೀಸಲಿಟ್ಟಿರುವುದು ನಾಡಿನ ದೌರ್ಭಾಗ್ಯ” ಎಂದು ಟೀಕಿಸಿದ್ದಾರೆ.

ಹಾಗೆಯೇ ಮಾನ್ಯ ಸಿದ್ದರಾಮಯ್ಯ ಅವರೇ ಬಜೆಟ್ ಪುಸ್ತಕದ ಪುಟಗಳಲ್ಲಿ ನೀವು ಸೃಷ್ಟಿಸಿದ ಉದ್ಯೋಗಗಳನ್ನು ಬಿಡಿ. ಡಿಗ್ರಿ ಹಿಡಿದು ಕೆಲಸವಿಲ್ಲದೆ ಅಲೆಯುತ್ತಿರುವ ನಿರುದ್ಯೋಗಿಗಳು ಮಾಡಿದ ಹೋರಾಟದ ಬಗ್ಗೆ ಮಾತನಾಡುವಂತೆ ಬಿಜೆಪಿ ಸವಾಲು ಹಾಕಿದೆ.





















































 
 

ಉಚಿತ ಪ್ರಯಾಣದ ಕ್ರೆಡಿಟ್ ಕಾಂಗ್ರೆಸ್ ಸರ್ಕಾರಕ್ಕೆ, ಆದರೆ ಹೊರೆ ಮಾತ್ರ ಸಾರಿಗೆ ನಿಗಮಕ್ಕೆ! ಶಕ್ತಿ ಯೋಜನೆಗಾಗಿ KSRTC ಸೇರಿದಂತೆ ಸಾರಿಗೆ ನಿಗಮಗಳಿಗೆ ಸಿದ್ದರಾಮಯ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಮೊತ್ತ ಬರೋಬ್ಬರಿ 5,313 ಕೋಟಿ ರೂ.! ಅನುದಾನವಿಲ್ಲದೆ ನಿಗಮಗಳು ಉಸಿರುಗಟ್ಟುತ್ತಿವೆ.ಕೊರತೆ ಬೋಗಸ್ ಬಜೆಟ್ ಮಂಡಿಸಿದ ಸಾಲರಾಮಯ್ಯನವರು ಕರ್ನಾಟಕವನ್ನು ಸಾಲದ ಕೂಪಕ್ಕೆ ದೂಡಿರುವುದಾಗಿ ಬಿಜೆಪಿ ಟ್ವೀಟ್ ಮೂಲಕ ಆರೋಪಿಸಿದೆ.

ರಾಜ್ಯದ ಅತಿಥಿ ಶಿಕ್ಷಕರಿಗೆ ಕಳೆದ 5 ತಿಂಗಳಿಂದ ಗೌರವ ಧನ ನೀಡದ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು, ಬಡ ಶಿಕ್ಷಕರಿಗೆ ನೀಡುವ ಒಂದು ಸಾವಿರ ನೀಡಲೂ ಸರ್ಕಾರದ ಬಳಿ ಹಣವಿಲ್ಲವೇ? ಕಳೆದ 5 ತಿಂಗಳಿನಿಂದ ಸಂಬಳವಿಲ್ಲದೆ ಶಿಕ್ಷಕರ ಜೀವನ ಬೀದಿಗೆ ಬಂದಿದೆ. ಹಬ್ಬ-ಹರಿದಿನಗಳು ಸಾಲದ ಸುಳಿಯಲ್ಲಿ ಕಳೆದುಹೋಗಿವೆ. ವರ್ಗಾವಣೆ, ಕಮಿಷನ್ ದಂಧೆಯಲ್ಲಿ ಮುಳುಗಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಶಿಕ್ಷಣ ವ್ಯವಸ್ಥೆ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸಿಎಂ ಸಿದ್ದರಾಮಯ್ಯನವರೇ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಿ ನೊಂದ ಶಿಕ್ಷಕರಿಗೆ ನೆರವಾಗಿ, ಇಲ್ಲದಿದ್ದರೆ ಕುರ್ಚಿ ಖಾಲಿ ಮಾಡಿ ಹೊರಡುವಂತೆಯೂ ಸವಾಲೊಡ್ಡಿದೆ.

ಸಾಲ ಮಾಡುವುದರಲ್ಲಿ ಸಿಎಂ ಸಿದ್ದರಾಮಯ್ಯನವರು ನಿಸ್ಸಿಮರು! ಕನ್ನಡಿಗರಿಗೆ ‘ಸಾಲದ ಭಾಗ್ಯ’ ನೀಡುವುದೇ ನಿಮ್ಮ ಬಜೆಟ್‌ನ ಅಸಲಿ ಸಾಧನೆಯೇ ?ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕಿದ್ದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ.

ಕರ್ನಾಟಕದ ಒಟ್ಟು ಸಾಲ 8.24 ಲಕ್ಷ ಕೋಟಿ ರೂಪಾಯಿಗಳಿಗೂ ಮೀರಿದ್ದು, ಪ್ರತಿ ಕನ್ನಡಿಗನ ಮೇಲೆ 1.17 ಲಕ್ಷ ರೂಪಾಯಿ ಸಾಲದ ಹೊರೆ ಹೊರಿಸಲಾಗಿದೆ. ಸಾಲ ಮಾಡುವುದರಲ್ಲಿ ನಂಬರ್ 1, ಅಭಿವೃದ್ಧಿ ಮಾತ್ರ ಶೂನ್ಯ – ಇದುವೇ ಕಾಂಗ್ರೆಸ್‌ ಸರ್ಕಾರದ ಸಾಧನೆ! ಎಂದು ಬಿಜೆಪಿ ವ್ಯಂಗ್ಯವಾಡಿದೆ.

ನೀರಾವರಿಗೆ ಪುಡಿಗಾಸು, ಯುವನಿಧಿಗೆ ಬೈ ಬೈ, ಕನ್ನಡಿಗರಿಗೆ ಸಾಲದ ಬರೆ, ಅಲ್ಪಸಂಖ್ಯಾತರಿಗೆ ಭರಪೂರ ಅನುದಾನ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಹಾಗೂ ಇತರೆ ಇಲಾಖೆಗಳ ಕಡೆಗಣನೆ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಕಡೆಗಣನೆ. ರೈತರು, ಶ್ರಮಿಕರು, ಬಡವರು ಮಹಿಳೆಯರು ಹಾಗೂ ಯುವಶಕ್ತಿಯನ್ನು ಕಡೆಗಣಿಸಿ, ಅಭಿವೃದ್ಧಿಗೆ ತಿಲಾಂಜಲಿ ಇಟ್ಟು ಕನ್ನಡಿಗರನ್ನು ಸಾಲದ ಸುಳಿಗೆ ತಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ನಾಡಿನ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕಾಸ್ತ್ರ ಪ್ರಯೋಗ ಮಾಡಿದೆ.

error: Content is protected !!
Scroll to Top