ಸತತ ಮೂರನೇ ಸಲ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗುತ್ತಿರುವ ಇಂಡಿಯಾ-ಇಂಗ್ಲಂಡ್
ಮುಂಬೈ: ಟಿ20 ವಿಶ್ವಕಪ್ನ ಸೆಮಿಫೈನಲ್ನ ಎರಡನೇ ಪಂದ್ಯ ಇಂದು ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲಂಡ್ ನಡುವೆ ನಡೆಯಲಿದೆ. ನಿನ್ನೆ ನಡೆದ ಮೊದಲ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ನ್ಯೂಜಿಲೆಂಡ್ ಮಖಾಡೆ ಮಲಗಿಸಿ ಫೈನಲ್ಗೇರಿದೆ. ನ್ಯೂಜಿಲೆಂಡ್ ಲೆಕ್ಕಕ್ಕೆ ಇಲ್ಲ ಎಂಬ ದಾಟಿಯಲ್ಲಿ ಮಾತನಾಡುತ್ತಿದ್ದ ದಕ್ಷಿಣ ಆಫ್ರಿಕ ಹೀನಾಯವಾಗಿ ಸೋತು ಗರ್ವಭಂಗವಾಗಿ ಕೂಟದಿಂದ ನಿರ್ಗಮಿಸಿದೆ.
ಭಾರತ ತಂಡ ಗುಂಪು ಹಂತದಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿತ್ತು. ಇಂಗ್ಲೆಂಡ್ ಒಂದು ಪಂದ್ಯದಲ್ಲಿ ಸೋತಿತ್ತಾದರೂ ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟಿತ್ತು. ಸೂಪರ್ 8 ಸುತ್ತಿನಲ್ಲಿ ಭಾರತ 1 ಪಂದ್ಯವನ್ನು ಸೋತು, 2 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ಗೆ ಟಿಕೆಟ್ ಪಡೆದರೆ, ಇತ್ತ ಇಂಗ್ಲೆಂಡ್ ಆಡಿದ ಮೂರು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ಗೆ ಅರ್ಹತೆ ಪಡೆದಿದೆ. ಹೀಗಾಗಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಕಾಳಗವನ್ನು ನಿರೀಕ್ಷಿಸಲಾಗಿದೆ. ಹೀಗಾಗಿ ಇಂದು ಹೈ ವೋಲ್ಟೇಜ್ ಪಂದ್ಯ ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
ಈ ಎರಡೂ ತಂಡಗಳು ಸೆಮಿಫೈನಲ್ನಲ್ಲಿ ಸತತ ಮೂರನೇ ಬಾರಿಗೆ ಮುಖಾಮುಖಿಯಾಗುತ್ತಿವೆ. 2022ರಲ್ಲಿ ಇಂಗ್ಲೆಂಡ್, ಭಾರತವನ್ನು ಸೋಲಿಸಿ ಕಪ್ ಗೆದ್ದರೆ, 2024ರಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು ಸೋಲಿಸಿ ಕಪ್ ಗೆದ್ದಿತು. ಈಗ 2026ರಲ್ಲಿ ಈ ಎರಡೂ ತಂಡಗಳು ಪರಸ್ಪರ ಎದುರಾಗುತ್ತಿವೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದೇ ಎದುರಾಳಿಯ ವಿರುದ್ಧ ಸತತ ಮೂರು ಸೆಮಿಫೈನಲ್ಗಳನ್ನು ಆಡುತ್ತಿರುವುದು ಅಪರೂಪದ ಕ್ಷಣವಾಗಿದೆ.
ವಾಂಖೆಡೆ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್ಮನ್ ಸ್ನೇಹಿ ಪಿಚ್ ಆಗಿರುವುದರಿಂದ ಎರಡೂ ಕಡೆಗಳಿಂದಲೂ ರನ್ ಮಳೆಯನ್ನು ನಿರೀಕ್ಷಿಸಬಹುದು. ಅಲ್ಲದೆ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಇಬ್ಬನಿಯ ನೆರವು ಸಿಗುವ ಕಾರಣದಿಂದಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಖಚಿತ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮಾರ್ಚ್ 5 ರಂದು ಮುಂಬೈನಲ್ಲಿ ಮಳೆಯಾಗುವ ಸಾಧ್ಯತೆಗಳಿಲ್ಲ. ಹಗಲಿನ ಗರಿಷ್ಠ ತಾಪಮಾನ ಸುಮಾರು 33 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದ್ದರೆ, ರಾತ್ರಿಯ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ. ಆರ್ದ್ರತೆಯ ಮಟ್ಟವು 35ರಿಂದ 51 ಪ್ರತಿಶತದವರೆಗೆ ಇರುತ್ತದೆ, ಅಂದರೆ ಆಟಗಾರರು ಹವಾಮಾನ ಸಂಬಂಧಿತ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಪಂದ್ಯದ ದಿನದಂದು ಮಳೆ ಬರುವ ಸಾಧ್ಯತೆ ಇಲ್ಲದಿದ್ದರೂ, ಐಸಿಸಿ ಮುನ್ನೆಚ್ಚರಿಕೆಯಾಗಿ ಮೀಸಲು ದಿನವನ್ನು ನಿಗದಿಪಡಿಸಿದೆ. ಯಾವುದೇ ಕಾರಣದಿಂದ ಮಾರ್ಚ್ 5ರಂದು ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಮಾರ್ಚ್ 6ರ ಮೀಸಲು ದಿನದಂದು ಪಂದ್ಯವನ್ನು ನಡೆಸಲಾಗುತ್ತದೆ. ಸೆಮಿಫೈನಲ್ ಮತ್ತು ಮೀಸಲು ದಿನ ಎರಡೂ ಮಳೆಯಿಂದಾಗಿ ರದ್ದಾದರೆ ನಿಯಮದ ಪ್ರಕಾರ ಇಂಗ್ಲೆಂಡ್ ನೇರವಾಗಿ ಫೈನಲ್ಗೆ ಮುನ್ನಡೆಯುತ್ತದೆ. ಏಕೆಂದರೆ ಸೂಪರ್ 8 ಹಂತದಲ್ಲಿ ಇಂಗ್ಲೆಂಡ್ ತನ್ನ ಗುಂಪಿನಲ್ಲಿ ಮೊದಲ ಸ್ಥಾನ ಪಡೆದರೆ, ಭಾರತ ಎರಡನೇ ಸ್ಥಾನ ಗಳಿಸಿತ್ತು.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್.
ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೇಮಿ ಓವರ್ಟನ್, ಆದಿಲ್ ರಶೀದ್, ಫಿಲಿಪ್ ಸಾಲ್ಟ್, ಜೋಶ್ ಟಂಗ್, ಲ್ಯೂಕ್ ವುಡ್.
























