ಚಿಕ್ಕಮಗಳೂರು: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚುತ್ತಿದ್ದು, ಉದ್ಯೋಗ ನಿಮಿತ್ತ ಇರಾನ್ಗೆ ತೆರಳಿದ್ದ ಮರ್ಚಂಟ್ ನೇವಿ ಉದ್ಯೋಗಿ ಕೊಪ್ಪ ತಾಲೂಕಿನ ನಿಶ್ಚಿತ್ ಕುಟುಂಬಸ್ಥರ ಸಂಪರ್ಕಕ್ಕೆ ಸಿಗದೇ ಇದ್ದು, ಪೋಷಕರು ಕಂಗಾಲಾಗಿದ್ದಾರೆ.
ಕಳೆದ ಐದು ತಿಂಗಳ ಹಿಂದೆ ನಿಶ್ಚಿತ್ ಇರಾನಿಗೆ ತೆರಳಿದ್ದರು. ಇದೀಗ ಅಲ್ಲಿ ಯುದ್ಧದ ತೀವ್ರತೆ ಹೆಚ್ಚಾಗುತ್ತಿದ್ದು, ನಿಶ್ಚಿತ್ನ ಸುರಕ್ಷತೆಯ ಬಗ್ಗೆ ಕುಟುಂಬ ವರ್ಗ ಆತಂಕ ವ್ಯಕ್ತಪಡಿಸಿರುವುದಾಗಿದೆ.
ಕಳೆದ ಕೆಲ ದಿನಗಳಿಂದ ನಿಶ್ಚಿತ್ ಅವರ ಫೋನ್ ಸ್ವಿಚ್ಆಫ್ ಆಗಿದೆ. ಅವರ ಸ್ಥಿತಿಗತಿಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರು ಕರೆ ಮಾಡುತ್ತಾರೆ ಎಂದು ಮನೆಯವರು ಕಾತರಿಸುತ್ತಿದ್ದಾರೆ. ಹಾಗೆಯೇ ನಿಶ್ಚಿತ್ ಅವರ ಬಗ್ಗೆ ಮಾಹಿತಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೆರವನ್ನೂ ಕೋರಿದ್ದಾರೆ. ನಿಶ್ಚಿತ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಬೇಕು ಎಂದೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ನಿಶ್ಚಿತ್ ಅವರು ತಮ್ಮ ಕೊನೆಯ ಫೋನ್ ಕಾಲ್ನಲ್ಲಿ ಇರಾನಿನಿಂದ ಕುವೈಟ್ಗೆ ಕಾರ್ಯ ನಿಮಿತ್ತ ತೆರಳುತ್ತಿರುವುದಾಗಿ ಹೇಳಿದ್ದರು. ಆ ಬಳಿಕ ನಿಶ್ಚಿತ್ ಅವರ ಸ್ಥಿತಿ ಏನಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲವಾಗಿದ್ದು , ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
























