ತೈಲ ಸಾಗಿಸುವ 700ಕ್ಕೂ ಅಧಿಕ ಹಡಗುಗಳು ಹೊರ್ಮುಜ್‌ ಜಲಸಂಧಿಯಲ್ಲಿ ಬಾಕಿ

ಪೂರೈಕೆ ವ್ಯತ್ಯಯ ; ಜಗತ್ತಿನಲ್ಲಿ ತೈಲಕ್ಕೆ ಹಾಹಾಕಾರ ಸಾಧ್ಯತೆ

ಟೆಹ್ರಾನ್‌: ಯುದ್ಧ ತೀವ್ರಗೊಂಡಿರುವಂತೆಯೇ ಜಗತ್ತಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ತೈಲ ಪೂರೈಕೆಯಾಗುವ ಹೊರ್ಮುಜ್‌ ಜಲಸಂಧಿಯನ್ನು ಪ್ರತಿತಂತ್ರದ ಭಾಗವಾಗಿ ಇರಾನ್ ಮುಚ್ಚಿದೆ. ಇರಾನ್‌ನ ಈ ಕ್ರಮದಿಂದ ಭಾರತ ಸೇರಿ ಹಲವು ದೇಶಗಳಿಗೆ ಕಚ್ಚಾತೈಲ ಪೂರೈಕೆಯಲ್ಲಿ ವ್ಯತಯವಾಗಿದ್ದು, ಪೆಟ್ರೋಲ್, ಡೀಸೆಲ್ ಕೊರತೆ ಹಾಗೂ ಎಲ್‌ಪಿಜಿ ಗ್ಯಾಸ್‌ಗೂ ಬರಗಾಲ ಎದುರಾಗುವ ಆತಂಕ ಉಂಟಾಗಿದೆ.

ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ದಾಳಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸದ್ಯಕ್ಕಂತೂ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. 4 ವಾರಗಳ ದಾಳಿಗೆ ಅಮೆರಿಕ ಪ್ಲ್ಯಾನ್‌ ಮಾಡಿಕೊಂಡಿದೆ. ಹೊರ್ಮುಜ್‌ ಜಲಸಂಧಿಯನ್ನು ದಾಟಲು ಯತ್ನಿಸುವ ಹಡಗನ್ನು ಕ್ಷಿಪಣಿ ಅಪ್ಪಳಿಸಿ ಸ್ಫೋಟಿಸುವುದಾಗಿ ಇರಾನ್‌ ಎಚ್ಚರಿಸಿದೆ.





















































 
 

ಅಮೆರಿಕ ಮತ್ತು ಅಮೆರಿಕ ಮಿತ್ರರಾಷ್ಟ್ರಗಳಿಗೆ ತಿರುಗೇಟು ಕೊಡಲು ಇರಾನ್‌ ಜಗತ್ತಿನ ಅತ್ಯಂತ ಪ್ರಮುಖ ತೈಲ ಮಾರ್ಗವಾದ ಹಾರ್ಮೂಜ್‌ ಜಲಸಂಧಿಯನ್ನೇ ಮುಚ್ಚಿದೆ. ಇದರಿಂದ ಇರಾನಿಯೇತರ 700ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳು ಜಲಸಂಧಿಯಲ್ಲೇ ಬಾಕಿ ಆಗಿವೆ. ಇದು ಭಾರತದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದೆ.

ವಿಂಡ್‌ವರ್ಡ್ ಮತ್ತು ಕೆಪ್ಲರ್‌ನ ಕಡಲ ವಿಶ್ಲೇಷಣಾ ಸಂಸ್ಥೆಗಳ ಅಂಕಿಅಂಶಗಳ ಪ್ರಕಾರ, ಮಾರ್ಚ್‌ 1 ರಂದು 28 ಲಕ್ಷ ಬ್ಯಾರಲ್‌ ತೈಲ ಹೊತ್ತ ಮೂರು ಟ್ಯಾಂಕರ್‌ಗಳು ಹಾರ್ಮೂಜ್‌ ಜಲಸಂಧಿಯನ್ನ ದಾಟಿದ್ದವು. ಆದರೂ ಇದು ಪ್ರಸಕ್ತ ವರ್ಷದಲ್ಲಿ ದೈನಂದಿನ ಸರಾಸರಿಗಿಂತ ಶೇ.86 ರಷ್ಟು ಕಡಿಮೆಯಾಗಿತ್ತು. ಮಾರ್ಚ್‌ 2ರ ಆರಂಭದ ವೇಳೆಗೆ ಒಂದು ಸಣ್ಣ ಟ್ಯಾಂಕರ್‌ ಮತ್ತು ಒಂದು ಸಣ್ಣ ಸರಕು ಹಡಗು ಮುಖ್ಯ ಲೇನ್‌ ಮೂಲಕ ಚಲಿಸಿದೆ. ಅದಾದ ಬಳಿಕ ಉಳಿದ ಟ್ಯಾಂಕರ್‌ಗಳು ಜಲಸಂಧಿಯಲ್ಲೇ ಬಾಕಿ ಆಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ತೈಲ ಮಾರ್ಗದಲ್ಲಿ ಒಟ್ಟು 706 ತೈಲ ಟ್ಯಾಂಕರ್‌ಗಳು ಎರಡೂ ಬದಿಗಳಲ್ಲಿ ಬಾಕಿ ಆಗಿವೆ. ಈ ಪೈಕಿ 334 ಕಚ್ಚಾತೈಲ ವಾಹಕಗಳು, 109 ಮಂದ (ಕೊಳಕು) ಉತ್ಪನ್ನ ಟ್ಯಾಂಕರ್‌ಗಳು ಮತ್ತು 263 ಶುದ್ಧ ಉತ್ಪನ್ನ ಹಡಗುಗಳು ಸ್ಥಗಿತಗೊಂಡಿವೆ ಎಂದು ವರದಿಗಳು ತಿಳಿಸಿವೆ.

ಭಾರತವು ಶೇ. 55 ರಷ್ಟು ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದ್ದು, 50%ಕ್ಕಿಂತ ಹೆಚ್ಚು ಮಧ್ಯಪ್ರಾಚ್ಯ ದೇಶಗಳಿಂದ ಬರುತ್ತಿದೆ. ಅರ್ಧದಷ್ಟು ಕಚ್ಚಾತೈಲ ಹಾರ್ಮೂಜ್‌ ಜಲಸಂಧಿಯಿಂದಲೇ ಸಪ್ಲೈ ಆಗಬೇಕು. ಭಾರತ ಪ್ರಸ್ತುತ 25-45 ದಿನಗಳಿಗಾಗುವಷ್ಟು ಕಚ್ಚಾತೈಲ ಹೊಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಉತ್ಪನ್ನ ಸಾಕಷ್ಟು ಇದೆ. ದೇಶವು 25-30 ದಿನಗಳ ಎಲ್‌ಪಿಜಿ ಸಂಗ್ರಹ ಹೊಂದಿದೆ. ಭಾರತದ ಬಳಿ ಸುಮಾರು 10 ಕೋಟಿ ಬ್ಯಾರಲ್‌ ತೈಲ ಸಂಗ್ರಹವಿದೆ. ಇದು 40 ರಿಂದ 45 ದಿನಗಳ ಅಗತ್ಯಗಳನ್ನು ಪೂರೈಸಬಲ್ಲದು. ಒಂದು ವೇಳೆ 4 ವಾರಕ್ಕಿಂತ ಹೆಚ್ಚು ಸಂಘರ್ಷ ನಡೆದರೆ ಭಾರತಕ್ಕೆ ಸಂಕಷ್ಟ ಇದೆ. ಈ ಮಧ್ಯೆ ಆಮದು ವೆಚ್ಚ ಹೆಚ್ಚಿದರೂ ತಾತ್ಕಾಲಿಕವಾಗಿ ಬೆಲೆ ಹೆಚ್ಚಿಸದಿರಲು ಚಿಂತನೆಯನ್ನು ಕೇಂದ್ರ ಸರ್ಕಾರ ನಡೆಸಿದೆ.

ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಹೆಚ್ಚುತ್ತಿರುವ ಮಧ್ಯೆ ವಿಮಾನಗಳ ಹಾರಾಟಗಳು ಶುರುವಾಗಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳಿಂದ ಒಟ್ಟು 58 ವಿಮಾನಗಳ ಕಾರ್ಯ ನಿರ್ವಹಿಸಲು ಯೋಜನೆ ರೂಪಿಸಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ 30 ಇಂಡಿಗೋ ವಿಮಾನಗಳು, 23 ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳು ಕಾರ್ಯ ನಿರ್ವಹಿಸಲಿವೆ. ಇಲ್ಲಿಯವರೆಗೆ 1,221 ಭಾರತೀಯ ಮತ್ತು 388 ಅಂತಾರಾಷ್ಟ್ರೀಯ ವಿಮಾನಗಳನ್ನ ರದ್ದುಗೊಳಿಸಲಾಗಿದೆ. ಏರ್ ಇಂಡಿಯಾ ಯುಎಇ, ಸೌದಿ ಅರೇಬಿಯಾ, ಇಸ್ರೇಲ್ ಮತ್ತು ಕತಾರ್‌ಗೆ ಹೆಚ್ಚಿನ ವಿಮಾನಗಳನ್ನು ಸ್ಥಗಿತಗೊಳಿಸಿದೆ. ದರಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಿಕ್ಕಿಬಿದ್ದ ಪ್ರಯಾಣಿಕರಿಗೆ ಸಹಾಯ ಮಾಡಲು ಸರ್ಕಾರ ಸೂಚನೆಗಳನ್ನು ನೀಡಿದೆ.

error: Content is protected !!
Scroll to Top