ದೇವ ಪ್ರಭುತ್ವ ಪರಂಪರೆಯ ಮುಂದುವರಿಕೆಯಾಗಿ ಮೊಜ್ತಬಾ ಖಮೇನಿಗೆ ಪರಮಾಧಿಕಾರ
ಟೆಹ್ರಾನ್: ಇಸ್ರೇಲ್-ಅಮೆರಿಕದ ಪ್ರತೀಕಾರದ ದಾಳಿಯ ನಡುವೆ ಇರಾನ್ ಹೊಸ ನಾಯಕನನ್ನು ಆಯ್ಕೆ ಮಾಡಿದೆ. ತಜ್ಞರ ಸಭೆಯು ಆಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಇರಾನ್ನ ಹೊಸ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಿದೆ ಎಂದು ಇರಾನ್ನ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
56 ವರ್ಷದ ಮೊಜ್ತಬಾ ಅವರನ್ನು ದೇಶದ ನಿಯಂತ್ರಣ ವಹಿಸಿಕೊಳ್ಳಲು ಆಯ್ಕೆ ಮಾಡಲಾಗಿದ್ದು, ದೀರ್ಘಕಾಲದ ನಾಯಕನಾಗಿ ಮುಂದುವರಿಯಲು ಎದುರು ನೋಡುತ್ತಿದ್ದಾರೆ. ಇದಕ್ಕೂ ಮುನ್ನ ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ ಅವರು ಇರಾನ್ನ ಮಧ್ಯಂತರ ಸರ್ವೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.
ಮೊಜ್ತಬಾ ಖಮೇನಿ (56) ಇಸ್ತೇಲ್ ದಾಳಿಯಲ್ಲಿ ಹತ್ಯೆಯಾದ ಆಯತೊಲ್ಲಾ ಅಲಿ ಖಮೇನಿ ಅವರ 2ನೇ ಪುತ್ರ. ದೇಶದ ಆಡಳಿತದ ಮೇಲೆ ಪ್ರಬಲ ಹಿಡಿತ ಹೊಂದಿದ್ದರು. ಆದರೆ ಬಹಳ ಹಿಂದಿನಿಂದಲೂ ಇರಾನ್ ಇಸ್ಲಾಮಿಕ್ ಗಣರಾಜ್ಯ ವಂಶಪಾರಂಪರ್ಯ ಆಡಳಿತವನ್ನು ವಿರೋಧಿತ್ತು. ಅಲ್ಲದೇ ಮೊಜ್ತಬಾ ಥೀಯೋಲಾಜಿಕಲ್ ಶಾಸ್ತ್ರ ಹೊಂದಿಲ್ಲ ಅನ್ನೋ ಆರೋಪ ಕೂಡ ಕೇಳಿಬಂದಿತ್ತು. ಆದರೆ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮೊಜ್ತಬಾ ಅವರನ್ನು ಬೆಂಬಲಿಸಲು ಮತ್ತು ಅವರನ್ನೇ ಹೊಸ ನಾಯಕನ್ನಾಗಿ ಆಯ್ಕೆ ಮಾಡಲು ಸಭೆ ಸೇರಿದ್ದ ಧರ್ಮಗುರುಗಳ ಮೇಲೆ ಒತ್ತಡ ಹೇರಿತ್ತು. ಆದ್ದರಿಂದ ಮೊಜ್ತಬಾ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ ಎನ್ನುತ್ತಿವೆ ವರದಿಗಳು.
ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಮೊಜ್ತಬಾ ತೆರೆಮರೆಯಲ್ಲಿದ್ದುಕೊಂಡೇ ಆಡಳಿತದ ಮೇಲೆ ಪ್ರಭಾವ ಬೀರುತ್ತಿದ್ದರು. ತಂದೆ ಅಲಿ ಖಮೇನಿ ಇದ್ದಾಗಲೂ ಪ್ರಾಯೋಗಿಕವಾಗಿ ಸುಪ್ರೀಂ ಲೀಡರ್ ಕಚೇರಿಯನ್ನು ನಿರ್ವಹಿಸುತ್ತಿದ್ದರು. ಅನೇಕ ವಿಶ್ಲೇಷಕರು ವ್ಯವಸ್ಥೆಯೊಳಗೆ ಹಿಡಿತ ಸಾಧಿಸಿದ್ದರು. ಮುಖ್ಯವಾಗಿ ಇರಾನ್ – ಇರಾಕ್ ಯುದ್ಧದ ಸಮಯದಲ್ಲಿ ಸಶಸ್ತ್ರ ಪಡೆಗಳಲ್ಲಿ ಸೇವೆ ಕೂಡ ಸಲ್ಲಿಸಿದ್ದರೂ ಎಂದು ಹೇಳಲಾಗಿದೆ. ಖಮೇನಿ ಬಹಳ ದಿನಗಳ ಹಿಂದೆಯೇ ಮಗನನ್ನು ಮುಂದಿನ ನಾಯಕನಾಗಿ ರೂಪಿಸುವ ಇಂಗಿತ ವ್ಯಕ್ತಪಡಿಸಿದ್ದರು.
ಇರಾನ್ನ ಸರ್ವೋಚ್ಚ ನಾಯಕರಾಗಿದ್ದ ಅಲಿ ಖಮೇನಿ ಇಸ್ರೇಲ್, ಅಮೆರಿಕ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದರು. ಈಗ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ದೇಶದ ಹೊಸ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಫೆಬ್ರವರಿ 28ರಂದು ಅಲಿ ಖಮೇನಿ ಅವರ ಕಚೇರಿಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ಆ ದಾಳಿಯಲ್ಲಿ ಖಮೇನಿ ಸಾವನ್ನಪ್ಪಿದ್ದರು. ಈ ಘಟನೆಯ ನಂತರ ಇರಾನ್ ಏಳು ದಿನಗಳ ಸಾರ್ವಜನಿಕ ರಜೆಯೊಂದಿಗೆ 40 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ದೇಶಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪ್ರಮುಖ ನಗರಗಳು ಮತ್ತು ಸರ್ಕಾರಿ ಕಟ್ಟಡಗಳ ಹೊರಗೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಮೊಜ್ತಬಾ ಖಮೇನಿ 1969ರಲ್ಲಿ ಮಶಾದ್ ನಗರದಲ್ಲಿ ಜನಿಸಿದರು, ಧಾರ್ಮಿಕ ಶಿಕ್ಷಣವನ್ನು ಪಡೆದಿದ್ದು, ಇರಾನ್-ಇರಾಕ್ ಯುದ್ಧದ ಅಂತಿಮ ಹಂತಗಳಲ್ಲಿ ಅವರು ಕ್ರಾಂತಿಕಾರಿ ಗಾರ್ಡ್ನಲ್ಲಿಯೂ ಸೇವೆ ಸಲ್ಲಿಸಿದ್ದರು. ಅವರನ್ನು ಬಹಳ ಹಿಂದಿನಿಂದಲೂ ತಂದೆ ತೆಗೆದುಕೊಳ್ಳುವ ನಿರ್ಧಾರಗಳ ಹಿಂದೆ ಇವರು ನಿಂತಿದ್ದರು, ಅವರಿಗೆ ತುಂಬಾ ಹತ್ತಿರವಾಗಿದ್ದರು ಎನ್ನಲಾಗಿದೆ. ಅವರು ಎಂದೂ ಸರ್ಕಾರಿ ಹುದ್ದೆಗಳನ್ನು ಹೊಂದಿಲ್ಲವಾದರೂ ಅವರು ತಮ್ಮ ತಂದೆಗೆ ವಿಶ್ವಾಸಾರ್ಹ ಸಲಹೆಗಾರರಾಗಿದ್ದರು. ಅವರು ಮಿಲಿಟರಿ ಮತ್ತು ಅರೆಸೈನಿಕ ಪಡೆಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು.
ಇರಾನ್ನ ಶಿಯಾ ದೇವಪ್ರಭುತ್ವ ವ್ಯವಸ್ಥೆಯಲ್ಲಿ ಸುಪ್ರೀಂ ಲೀಡರ್ ಅತ್ಯಂತ ಶಕ್ತಿಶಾಲಿ ಸ್ಥಾನವಾಗಿದೆ. ಈ ಹುದ್ದೆಯನ್ನು ಹೊಂದಿರುವ ವ್ಯಕ್ತಿ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿರುತ್ತಾರೆ ಮತ್ತು ದೇಶದ ಪ್ರಮುಖ ರಾಜಕೀಯ, ಮಿಲಿಟರಿ ಮತ್ತು ಕಾರ್ಯತಂತ್ರದ ನಿರ್ಧಾರಗಳ ಮೇಲೆ ಅಂತಿಮ ನಿರ್ಧಾರವನ್ನು ಹೊಂದಿರುತ್ತಾರೆ.
2009ರಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಮೊಜ್ತಬಾ ಹೆಸರು ಕೇಳಿಬಂದಿತ್ತು, ಪ್ರತಿಭಟನೆಗಳನ್ನು ನಿರ್ದಯವಾಗಿ ಹತ್ತಿಕ್ಕುವಲ್ಲಿ ಅವರ ಪಾತ್ರವಿತ್ತು. ಈಗ ಅವರನ್ನು ಸರ್ವೋಚ್ಚ ನಾಯಕನನ್ನಾಗಿ ನೇಮಿಸಿರುವುದು ದೇಶದಲ್ಲಿ ಹೊಸ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ. 1979ರ ಕ್ರಾಂತಿಯ ಸಮಯದಲ್ಲಿ ವಂಶಾವಳಿಯ ಆಧಾರದ ಮೇಲೆ ಅಧಿಕಾರ ವರ್ಗಾವಣೆಗೆ ವಿರೋಧವಿತ್ತು. ಆದ್ದರಿಂದ ಕೆಲವರು ಅವರ ಆಯ್ಕೆಯನ್ನು ಪ್ರಶ್ನಿಸುತ್ತಿದ್ದಾರೆ.
























