ಬೆಳ್ತಂಗಡಿ: ರಸ್ತೆಗಳಲ್ಲಿ ವಿವಿಧ ಭಂಗಿಗಳಲ್ಲಿ ಅಪಾಯಕಾರಿ ಸ್ಟಂಟ್ಗಳನ್ನು ನಿರ್ಲಕ್ಷ್ಯತನದಿಂದ ಮಾಡಿ ಸಾಮಾಜಿಕ ಜಾಲತಾಣಗಳ್ಲಿ ಪೋಸ್ಟ್ ಮಾಡುತ್ತಿದ್ದ ಯುವಕನನ್ನು ಬೆಳ್ತಂಗಡಿಯ ಸಂಚಾರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿಯನ್ನು ನೂಜಿಲ ನಿವಾಸಿ ಸಂಪತ್(30) ಎಂದು ಗುರುತಿಸಲಾಗಿದೆ.
ಆರೋಪಿ ವಿವಿಧ ಕಡೆಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್ ಓಡಿಸಿ, ಸ್ಟಂಟ್ ಮಾಡಿ, ಹೆಲ್ಮೆಟ್ ರಹಿತ ಚಾಲನೆ ಮಾಡುವ ಮೂಲಕ ಅಪರಾಧ ಎಸಗಿದ್ದ. ಫೆ. 8 ರಂದು ಸಾರ್ವಜನಿಕರಿಗೆ ಅಪಾಯ ಸಂಭವಿಸುವ ರೀತಿಯಲ್ಲಿ ಹೆಲ್ಮೆಟ್ ಸಹ ಧರಿಸದೆ ಅಪಾಯಕಾರಿ ಎಂಬಂತೆ ವೀಲಿಂಗ್ ಮಾಡಿ ಬೈಕ್ ಓಡಿಸಿದ್ದು, ಈ ಬಗ್ಗೆ ಪೊಲೀಸ್ ಸಿಬ್ಬಂದಿ ಫ್ರಾನ್ಸಿಸ್ ತಾವ್ರೋ ಅವರು ಪೊಲೀಸ್ ಠಾಣೆಗೆ ರಿಪೋರ್ಟ್ ಮಾಡಿದ್ದರು.
ಈತನ ಬಗ್ಗೆ ಸಾರ್ವಜನಿಕರು ಸಹ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಈತ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ. ಆದರೆ ಈತನ ಬಗ್ಗೆ ಬಂದ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ಸದ್ಯ ಆತನನ್ನು ಬಂಧಿಸಿದ್ದಾರೆ. ಬೈಕ್ ಸಮೇತ ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿವಿಧ ಅಪರಾಧ ಕಲಂಗಳಡಿ ಕೇಸು ದಾಖಲಿಸಿದ್ದಾರೆ.
























