ನವದೆಹಲಿ: ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಇದರ ಪರಿಣಾಮ ಭಾರತದಲ್ಲೂ ಕಂಡು ಬರುವ ಸಾಧ್ಯತೆ ಇರುವುದಾಗಿ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದೇಶದ ಎಲ್ಲಾ ರಾಜ್ಯಗಳ ಸರ್ಕಾರಗಳು, ಭದ್ರತಾ ಸಂಸ್ಥೆಗಳು ಹೆಚ್ಚುವರಿ ಕಾಳಜಿ ವಹಿಸುವಂತೆ ಕೇಂದ್ರ ಸರ್ಕಾರ ಪತ್ರದ ಮುಖೇನ ತಿಳಿಸಿರುವುದಾಗಿದೆ.
ದೇಶದಲ್ಲಿ ಸಾರ್ವಜನಿಕ ಕೂಟಗಳು, ಧಾರ್ಮಿಕ ಸಭೆಗಳಲ್ಲಿ ಉದ್ರೇಕಕಾರಿ ಭಾಷಣಗಳ ಮೂಲಕ ಅಶಾಂತಿ ಹುಟ್ಟಿಸುವ ಸಾಧ್ಯತೆ ಸಹ ಇದೆ. ಆದ್ದರಿಂದ ಇಂತಹ ಎಲ್ಲಾ ವಿಷಯಗಳ ಮೇಲೆಯೂ ನಿಗಾ ಇರಿಸಬೇಕು. ಇರಾನ್ ಪರ ಪ್ರಚಾರ ನಡೆಸಿ ಉದ್ವಿಗ್ನತೆ ಉಂಟುಮಾಡುವ ಅಂಶಗಳನ್ನು ಗುರುತಿಸಿ ಮೇಲ್ವಿಚಾರಣೆ ಮಾಡುವಂತೆಯೂ ಸೂಚಿಸಲಾಗಿದೆ.
ಯಾವುದೇ ರೀತಿಯ ಅಪಾಯಗಳು ಸಂಭವಿಸದ ಹಾಗೆ ಸ್ಥಳೀಯ ಭದ್ರತಾ ಸಂಸ್ಥೆಗಳು ಮತ್ತು ಗುಪ್ತಚರ ಸಂಸ್ಥೆಗಳು ಸಮನ್ವಯ ಸಾಧಿಸಿ ಕೆಲಸ ಮಾಡಬೇಕು ಎಂದು ಕೇಂದ್ರ ಹೇಳಿದೆ.
























