ಸಂಜು ಸ್ಯಾಮ್ಸನ್ ಅಜೇಯ ಆಟದಿಂದ ವೆಸ್ಟ್ ಇಂಡೀಸನ್ನು ಮಣಿಸಿದ ಭಾರತ
ಕೋಲ್ಕತ್ತಾ: ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಅರ್ಧ ಶತಕದ ನೆರವಿನಿಂದ ವೆಸ್ಟ್ ಇಂಡಿಸ್ ವಿರುದ್ಧ ಭಾರತ 5 ವಿಕೆಟ್ಗಳ ರೋಚಕ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ವೆಸ್ಟ್ ಇಂಡೀಸ್ 4 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಕಠಿಣ ಮೊತ್ತವನ್ನು ಬೆನ್ನಟ್ಟಿದ ಭಾರತ ಇನ್ನೂ 4 ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ ಜಯಗಳಿಸಿತು. ಈ ಜಯದೊಂದಿಗೆ ಭಾರತ ಮಾ.5ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಭಾರತ ಕೊನೆಯ 12 ಎಸೆತಗಳಲ್ಲಿ 17 ರನ್ಗಳ ಅಗತ್ಯವಿತ್ತು. 19ನೇ ಓವರ್ನ ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಔಟಾದಾಗ ಟೀಂ ಇಂಡಿಯಾದ ಅಭಿಮಾನಿಗಳ ಒತ್ತಡ ಹೆಚ್ಚಾಗಿತ್ತು. ಈ ವೇಳೆ ಕ್ರೀಸಿಗೆ ಬಂದ ಶಿವಂ ದುಬೆ 4 ಎಸೆತಗಳಲ್ಲಿ 2 ಬೌಂಡರಿ ಹೊಡೆದು 8 ರನ್ ಹೊಡೆದು ಪಂದ್ಯಕ್ಕೆ ರೋಚಕ ತಿರುವು ನೀಡಿದರು.
ಕೊನೆಯ ಓವರ್ನಲ್ಲಿ ಭಾರತಕ್ಕೆ 7 ರನ್ ಬೇಕಿತ್ತು. ಸಂಜು ಸ್ಯಾಮ್ಸನ್ ಜೋಸೆಫ್ ಅವರ ಮೊದಲ ಎಸೆತವನ್ನು ಸಿಕ್ಸ್ಗೆ ಅಟ್ಟಿದರೆ ಎರಡನೇ ಎಸೆತವನ್ನು ಬೌಂಡರಿಗೆ ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು.
ಭಾರತ 41 ರನ್ ಗಳಿಸುವಷ್ಟರಲ್ಲಿ ಅಭಿಷೇಕ್ ಶರ್ಮಾ 10 ರನ್, ಇಶನ್ ಕಿಶನ್ 10 ರನ್ ಗಳಿಸಿ ಔಟಾದರೂ ಆರಂಭಿಕ ಆಟಗಾರನಾಗಿ ಬಂದ ಸಂಜು ಸ್ಯಾಮ್ಸನ್ ಅಜೇಯ 97 ರನ್(50 ಎಸೆತ, 12 ಬೌಂಡರಿ, 4 ಸಿಕ್ಸ್) ಹೊಡೆದು ತಂಡವನ್ನು ಸೆಮಿಫೈನಲಿಗೆ ತೆಗೆದುಕೊಂಡು ಹೋದರು. ಈ ಅತ್ಯುತ್ತಮ ಆಟಕ್ಕೆ ಅರ್ಹವಾಗಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಎರಡು ವಿಕೆಟ್ ಪತನದ ಬಳಿಕ ಬಂದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ 35 ಎಸೆತಗಳಲ್ಲಿ 58 ರನ್ ಜೊತೆಯಾಟವಾಡಿದರು. 18 ರನ್(16 ಎಸೆತ, 1 ಬೌಂಡರಿ, 1 ಸಿಕ್ಸ್) ಆದಾಗ ದೊಡ್ಡ ಹೊಡೆತ ಹೊಡೆಯಲು ಹೋಗಿ ಸೂರ್ಯ ವಿಕೆಟ್ ಒಪ್ಪಿಸಿದರು.
ನಂತರ ಬಂದ ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ 26 ಎಸೆತಗಳಲ್ಲಿ 42 ರನ್ ಜೊತೆಯಾಟವಾಡಿದರು. ಉತ್ತಮವಾಗಿ ಆಡುತ್ತಿದ್ದ ತಿಲಕ್ ವರ್ಮಾ 27 ರನ್(15 ಎಸೆತ, 4 ಬೌಂಡರಿ, 1 ಸಿಕ್ಸ್) ಹೊಡೆದು ಔಟಾದರು. ಹಾರ್ದಿಕ್ ಪಾಂಡ್ಯ 17 ರನ್ ಹೊಡೆದು ಕ್ಯಾಚ್ ನೀಡಿ ಹೊರ ನಡೆದರು.
ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟಿಗೆ 68 ರನ್ ಜೊತೆಯಾಟ ಬಂದಿತ್ತು. ಒಂದು ಹಂತದಲ್ಲಿ 102 ರನ್ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ವಿಂಡೀಸ್ 119 ರನ್ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ವಿಕೆಟ್ ಪತನಗೊಂಡಿದ್ದರೂ ರೋವ್ಮನ್ ಪೊವೆಲ್ ಮತ್ತು ಜೇಸನ್ ಫೋಲ್ಡರ್ ಮುರಿಯದ 5ನೇ ವಿಕೆಟಿಗೆ 35 ಎಸೆತಗಳಲ್ಲಿ 76 ರನ್ ಜೊತೆಯಾಟವಾಡಿದ್ದರಿಂದ ವಿಂಡೀಸ್ ಮೊತ್ತ 190 ರನ್ಗಳ ಗಡಿಯನ್ನು ದಾಟಿತ್ತು.
ವಿಂಡೀಸ್ ಪರ ಶಾಯ್ ಹೋಪ್ 32 ರನ್(33 ಎಸೆತ, 3 ಬೌಂಡರಿ, 1 ಸಿಕ್ಸ್), ರೋಸ್ಟನ್ ಚೇಸ್ 40 ರನ್(25 ಎಸೆತ, 5 ಬೌಂಡರಿ, 1 ಸಿಕ್ಸ್), ಹೇಟ್ಮಾಯರ್ 27 ರನ್(12 ಎಸೆತ, 1 ಬೌಂಡರಿ, 2 ಸಿಕ್ಸ್) ಹೊಡೆದು ಔಟಾದರು. ರೋವ್ಮನ್ ಪೊವೆಲ್ ಔಟಾಗದೆ 34 ರನ್(19 ಎಸೆತ, 3 ಬೌಂಡರಿ, 2 ಸಿಕ್ಸ್), ಜೇಸನ್ ಫೋಲ್ಡರ್ ಔಟಾಗದೆ 37 ರನ್(22 ಎಸೆತ, 2 ಬೌಂಡರಿ, 3 ಸಿಕ್ಸ್) ಹೊಡೆದರು.
ಟೀಂ ಇಂಡಿಯಾ ಫೀಲ್ಡಿಂಗ್ ಇಂದು ಬಹಳ ಕಳಪೆಯಾಗಿತ್ತು. ಅಭಿಷೇಕ್ ಶರ್ಮಾ 2 ಕ್ಯಾಚ್ ಬಿಟ್ಟರೆ, ತಿಲಕ್ ವರ್ಮಾ 1 ಕ್ಯಾಚ್ ಬಿಟ್ಟಿದ್ದರು. ವರುಣ್ ಚಕ್ರವರ್ತಿ ಆರಂಭದಲ್ಲಿ ರನೌಟ್ ಮಾಡುವ ಅವಕಾಶವನ್ನೂ ಕೈ ಚೆಲ್ಲಿದ್ದರು. ಜಸ್ಪ್ರೀತ್ ಬುಮ್ರಾ ಮಧ್ಯದಲ್ಲಿ 2 ವಿಕೆಟ್ ಪಡೆದ ಕಾರಣ ವಿಂಡೀಸ್ ರನ್ ಓಟಕ್ಕೆ ಸ್ವಲ್ಪ ಕಡಿವಾಣ ಬಿದ್ದಿತ್ತು.
























