ಇರಾನ್‌ನ ಪ್ರಧಾನ ಸೇನಾ ಕಚೇರಿ ನಾಶ

ಮುಂದುವರಿದ ಯುದ್ಧ ; ಮಧ್ಯಪ್ರಾಚ್ಯ ನಿಗಿ ನಿಗಿ ಕೆಂಡ

ಟೆಹ್ರಾನ್ : ಇರಾನ್‌ನ ಅತ್ಯಂತ ಪ್ರಮುಖ ಸೇನಾ ವಿಭಾಗವಾದ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ (ಐಆರ್‌ಜಿಸಿ) ಪ್ರಧಾನ ಕಚೇರಿಯನ್ನೇ ದಾಳಿಯಲ್ಲಿ ನಾಶಪಡಿಸಲಾಗಿದೆ ಎಂದು ಅಮೆರಿಕ ದೃಢಪಡಿಸಿದೆ. ಕಳೆದ 47 ವರ್ಷಗಳಲ್ಲಿ 1,000ಕ್ಕೂ ಹೆಚ್ಚು ಅಮೆರಿಕನ್ನರ ಸಾವಿಗೆ ಐಆರ್​ಜಿಸಿ ಕಾರಣವಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿದೆ. ಈ ಕ್ರಮವನ್ನು “ಹಾವಿನ ತಲೆಯನ್ನು ಕತ್ತರಿಸುವುದು” ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಬಣ್ಣಿಸಿದೆ ಮತ್ತು ಯುಎಸ್ ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯವನ್ನು ಹೊಂದಿದೆ ಮತ್ತು ಐಆರ್​ಜಿಸಿ ಇನ್ನು ಮುಂದೆ ಪ್ರಧಾನ ಕಚೇರಿಯನ್ನು ಹೊಂದಿರುವುದಿಲ್ಲ ಎಂದು ಹೇಳಿದೆ.

ಇಸ್ರೇಲಿ ಸೇನೆಯು ಐಆರ್‌ಜಿಸಿ ಕೇಂದ್ರ, ಗುಪ್ತಚರ ಪ್ರಧಾನ ಕಚೇರಿ, ಐಆರ್‌ಜಿಸಿ ವಾಯುಪಡೆಯ ಕಮಾಂಡ್ ಕೇಂದ್ರ ಮತ್ತು ಆಂತರಿಕ ಭದ್ರತಾ ಪ್ರಧಾನ ಕಚೇರಿ ಸೇರಿದಂತೆ ಡಜನ್‌ಗಟ್ಟಲೆ ಇರಾನಿನ ಮಿಲಿಟರಿ ಕಮಾಂಡ್ ಕೇಂದ್ರಗಳ ಮೇಲೆ ದಾಳಿ ನಡೆಸಿರುವುದಾಗಿ ವರದಿ ಮಾಡಿದೆ.





















































 
 

ಶನಿವಾರ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಹತ್ಯೆಯ ನಂತರ ಅಮೆರಿಕ-ಇಸ್ರೇಲಿ ಜಂಟಿ ಕಾರ್ಯಾಚರಣೆಗಳು ಮುಂದುವರಿದಿದೆ. ಇರಾನ್ 66 ವರ್ಷದ ಧರ್ಮಗುರು ಅಲಿರೆಜಾ ಅರಾಫಿ ಅವರನ್ನು ಮೂರು ಸದಸ್ಯರ ನಾಯಕತ್ವ ಮಂಡಳಿಗೆ ನೇಮಿಸಿತು, ಹೊಸ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವವರೆಗೆ ದೇಶವನ್ನು ಆಳುವ ಜವಾಬ್ದಾರಿಯನ್ನು ಹೊಂದಿದ್ದಾರೆ.

ಇಡೀ ಮಧ್ಯಪ್ರಾಚ್ಯ ಈಗ ಕುದಿಯುತ್ತಿರುವ ಕೆಂಡದಂತಾಗಿದ್ದು, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಹತರಾದ ಸುದ್ದಿ ದೃಢಪಡುತ್ತಿದ್ದಂತೆಯೇ ಇರಾನ್‌ನಲ್ಲಿ ಸೇಡಿನ ಕಿಚ್ಚು ಹೊತ್ತಿ ಉರಿಯುತ್ತಿದೆ.

ಇರಾನ್‌ನ ಪವಿತ್ರ ನಗರವಾದ ಕೊಮ್​ನಲ್ಲಿರುವ ಜಮ್ಕಾರನ್ ಮಸೀದಿಯ ಮೇಲೆ ಸೇಡಿನ ಕೆಂಪು ಬಾವುಟ ಹಾರಾಡುತ್ತಿದ್ದು, ಇದು ಇಡೀ ಜಗತ್ತಿಗೆ ಒಂದು ಭೀಕರ ಎಚ್ಚರಿಕೆಯ ಸಂಕೇತವಾಗಿದೆ. ಇರಾನ್ ಸಂಪ್ರದಾಯದ ಪ್ರಕಾರ ಮಸೀದಿಯ ಮೇಲೆ ಕೆಂಪು ಬಾವುಟ ಹಾರಿಸುವುದು ಎಂದರೆ ಅದು ಕೇವಲ ಶೋಕವಲ್ಲ, ಬದಲಾಗಿ ರಕ್ತಕ್ಕೆ ರಕ್ತದ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ.

ಖಮೇನಿ ಸಾವಿಗೆ ಅಮೆರಿಕ ಮತ್ತು ಇಸ್ರೇಲ್ ಬೆಲೆ ತೆರಲೇಬೇಕು ಎಂಬ ಸಂದೇಶವನ್ನು ಇರಾನ್ ರವಾನಿಸಿದೆ. ಖಮೇನಿ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬನಾದ ಖಮೇನಿ ಮೃತಪಟ್ಟಿದ್ದಾನೆ. ಇರಾನ್ ಜನರು ತಮ್ಮ ದೇಶವನ್ನು ಮರಳಿ ಪಡೆಯಲು ಇದು ಒಳ್ಳೆಯ ಅವಕಾಶ ಎಂದು ಹೇಳಿದ್ದಾರೆ.

error: Content is protected !!
Scroll to Top