ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ದಾಳಿಗೊಳಗಾಗಿದ್ದ ವಾಯುನೆಲೆ
ಇಸ್ಲಾಮಾಬಾದ್ : ಆಪರೇಷನ್ ಸಿಂದೂರ ಕಾರ್ಯಾಚರಣೆ ಸಂದರ್ಭದಲ್ಲಿ ಭಾರತ ದಾಳಿ ಮಾಡಿದ್ದ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆ ಮೇಲೆ ಇದೀಗ ಅಫಘಾನಿಸ್ತಾನ ಕೂಡ ದಾಳಿ ಮಾಡಿ ಭಾರಿ ಹಾನಿ ಎಸಗಿದೆ. ಭಾರತ ನಡೆಸಿದ ದಾಳಿಯಿಂದ ಕುಸಿದು ಬಿದ್ದು, ಬಳಿಕ ಎದ್ದು ನಿಂತಿದ್ದ ಪಾಕಿಸ್ತಾನದ ರಾವಲ್ಪಿಂಡಿಯ ಚಕ್ಲಾಲಾ ಪ್ರದೇಶದ ನೂರ್ ಖಾನ್ ವಾಯುನೆಲೆಯ ಮೇಲೆ ಅಫ್ಘಾನಿಸ್ತಾನದಿಂದ ವಾಯುದಾಳಿ ನಡೆದಿದೆ. ಕಳೆದ ಮೇ ತಿಂಗಳಿನಲ್ಲಿ ಭಾರತವು ಇದೇ ವಾಯುನೆಲೆ ಮೇಲೆ ದಾಳಿ ನಡೆಸಿತ್ತು. ಹಲವು ತಿಂಗಳುಗಳ ಬಳಿಕ ಪಾಕಿಸ್ತಾನ ಹೇಗೋ ಸುಧಾರಿಸಿಕೊಂಡು ನಿರ್ಮಾಣ ಕಾರ್ಯ ಪೂರ್ಣಗೊಳಿಸಿತ್ತು.
ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಪಾಕಿಸ್ತಾನದಲ್ಲಿರುವ ಹಲವಾರು ಪ್ರಮುಖ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಪಾಕಿಸ್ತಾನದೊಳಗಿನ ಪ್ರಮುಖ ವಾಯುನೆಲೆಗಳು ಮತ್ತು ಮಿಲಿಟರಿ ಸೌಲಭ್ಯಗಳ ಮೇಲೆ ತನ್ನ ಪಡೆಗಳು ಡ್ರೋನ್ ದಾಳಿ ನಡೆಸಿವೆ ಎಂದು ತಾಲಿಬಾನ್ ಹೇಳಿಕೊಂಡಿದೆ.
ರಾವಲ್ಪಿಂಡಿಯಲ್ಲಿರುವ ಪ್ರಮುಖ ಮಿಲಿಟರಿ ವಾಯುನೆಲೆಯಾದ ನೂರ್ ಖಾನ್ ವಾಯುನೆಲೆಯು ದಾಳಿಗೊಳಗಾದ ಪ್ರಮುಖ ಪ್ರದೇಶಗಳಲ್ಲಿ ಒಂದಾಗಿದೆ. ಬಲೂಚಿಸ್ತಾನದ ಕ್ವೆಟ್ಟಾದಲ್ಲಿರುವ 12ನೇ ಡಿವಿಷನ್ ಪ್ರಧಾನ ಕಚೇರಿ ಮತ್ತು ಖೈಬರ್ ಪಖ್ತುನ್‌ಖ್ವಾದ ಮೊಹಮ್ಮದ್ ಏಜೆನ್ಸಿಯಲ್ಲಿರುವ ಖ್ವಾಜೈ ಮಿಲಿಟರಿ ಶಿಬಿರದ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾಬೂಲ್, ಬಾಗ್ರಾಮ್ ಮತ್ತು ಇತರ ಸ್ಥಳಗಳ ಮೇಲೆ ಪಾಕಿಸ್ತಾನದ ಮಿಲಿಟರಿ ದಾಳಿಗಳಿಗೆ ಪ್ರತೀಕಾರವಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಅಫ್ಘಾನಿಸ್ತಾನ ಹೇಳಿದೆ. ಮಿಲಿಟರಿ ಕಾರ್ಯಾಚರಣೆಯಲ್ಲಿ 415 ಅಫ್ಘಾನ್ ತಾಲಿಬಾನ್ ಸಿಬ್ಬಂದಿಯನ್ನು ಕೊಂದಿದ್ದು 580ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ.
2,600 ಕಿ.ಮೀ.ಗೂ ಹೆಚ್ಚು ಉದ್ದದ ಗಡಿಯಲ್ಲಿ 53 ಸ್ಥಳಗಳ ಮೇಲೆ ಅಫ್ಘಾನ್ ತಾಲಿಬಾನ್ ದಾಳಿಕೋರರು ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಗುರುವಾರ ರಾತ್ರಿ ‘ಗಜಬ್ ಲಿಲ್ ಹಕ್’ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಕಾರ್ಯಾಚರಣೆಯ ಸಮಯದಲ್ಲಿ 185 ಟ್ಯಾಂಕ್‌ಗಳು, ಶಸ್ತ್ರಸಜ್ಜಿತ ವಾಹನಗಳು ಮತ್ತು ಫಿರಂಗಿ ಬಂದೂಕುಗಳು ನಾಶವಾಗಿವೆ ಎಂದುಹೇಳಲಾಗಿದೆ.
ಇದಕ್ಕೂ ಮೊದಲು, ಪಾಕಿಸ್ತಾನದ ಸಂಸದೀಯ ವ್ಯವಹಾರಗಳ ಸಚಿವ ಡಾ.ತಾರಿಕ್ ಫಜಲ್ ಚೌಧರಿ, ಅಫ್ಘಾನ್ ತಾಲಿಬಾನ್ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ ಎಂದು ಹೇಳಿದ್ದರು. ಮಿಲಿಟರಿ ಕಾರ್ಯಾಚರಣೆ ಮುಕ್ತಾಯಗೊಂಡಿದೆ ಎಂದು ಸೂಚಿಸುವ ಸಾಮಾಜಿಕ ಮಾಧ್ಯಮ ವರದಿಗಳನ್ನು ಅವರು ನಿರಾಕರಿಸಿದ್ದಾರೆ.
ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಅಫ್ಘಾನ್ ಕಡೆಯವರು ಹೇಳಿಕೊಂಡರೂ, ಪಾಕಿಸ್ತಾನಿ ಅಧಿಕಾರಿಗಳು ಈ ಹೇಳಿಕೆಯನ್ನು ತಿರಸ್ಕರಿಸಿದರು. ತಾಲಿಬಾನ್ ಪ್ರಕಾರ, ಪಾಕಿಸ್ತಾನ ಮತ್ತೆ ಅಫ್ಘಾನ್ ವಾಯುಪ್ರದೇಶವನ್ನು ಉಲ್ಲಂಘಿಸಿದರೆ ಅಥವಾ ಆಕ್ರಮಣಕಾರಿ ಕ್ರಮ ಕೈಗೊಂಡರೆ, ಅದು ಹೆಚ್ಚು ಕಠಿಣ ಮತ್ತು ನಿರ್ಣಾಯಕ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
























