80 ಲ.ರೂ. ಮೌಲ್ಯದ ವಿದೇಶಿ ಕರೆನ್ಸಿ ವಶ : ಇಬ್ಬರು ಮಹಿಳೆಯರ ಸಹಿತ ಮೂವರ ಸೆರೆ

ಮಂಗಳೂರು ವಿಮಾನ ನಿಲ್ದಾಣ ಮೂಲಕ ವಿದೇಶಿ ಕರೆನ್ಸಿ ಸಾಗಿಸಲು ಯತ್ನ

ಮಂಗಳೂರು : ಸುಮಾರು 80 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗುತ್ತಿದ್ದ ವೇಳೆ ವಶಪಡಿಸಿಕೊಂಡು ಕೇರಳ ಮೂಲದ ಓರ್ವ ಪುರುಷ ಮತ್ತು ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ರೆವೆನ್ಯೂ ಇಂಟಲಿಜೆನ್ಸ್ ನಿರ್ದೇಶನಾಲಯ (ಡಿಆರ್‌ಐ) ಮಂಗಳೂರು ಘಟಕ ತಿಳಿಸಿದೆ.

ಫೆ.27ರಂದು ವಿಮಾನ ನಿಲ್ದಾಣದ ನಿರ್ಗಮನ ಹಾಲ್‌ನಲ್ಲಿ ಒಬ್ಬ ಪುರುಷ ಮತ್ತು ಇಬ್ಬರು ಮಹಿಳಾ ಪ್ರಯಾಣಿಕರು ಅಬುಧಾಬಿಗೆ ಪ್ರಯಾಣಿಸಲು ಆಗಮಿಸಿದ್ದರು. ಖಚಿತ ಗುಪ್ತಚರ ಮಾಹಿತಿ ಆಧಾರದಲ್ಲಿ ಡಿಆರ್‌ಐ ಮಂಗಳೂರು ಪ್ರಾದೇಶಿಕ ಘಟಕದ ಅಧಿಕಾರಿಗಳು ಅವರನ್ನು ತಡೆದು ತಪಾಸಣೆಗೆ ಒಳಪಡಿಸಿದಾಗ ವಿದೇಶಿ ಕರೆನ್ಸಿಗಳನ್ನು ಅವರ ಕೈಚೀಲ ಮತ್ತು ಚೆಕ್‌ಇನ್ ಬ್ಯಾಗ್‌ಗಳಲ್ಲಿ ಅತ್ಯಂತ ಚಾಣಾಕ್ಷತನದಿಂದ ಅಡಗಿಸಿ ಇಟ್ಟಿರುವುದು ಪತ್ತೆಯಾಗಿದೆ. ವಶಪಡಿಸಿಕೊಳ್ಳಲಾದ ಕರೆನ್ಸಿಯಲ್ಲಿ ಅಮೆರಿಕನ್ ಡಾಲರ್‌ಗಳು, ಸ್ವಲ್ಪ ಪ್ರಮಾಣದ ಪೌಂಡ್ ಸ್ಟರ್ಲಿಂಗ್, ಸೌದಿ ರಿಯಾಲ್ ಮತ್ತು ಯುಎಇ ದಿರಾಮ್ ಸೇರಿವೆ.





















































 
 

ಕೇರಳ ಮೂಲದ ಈ ಮೂವರನ್ನು ಕಸ್ಟಮ್ಸ್ ಕಾಯ್ದೆ, 1962ರಡಿ ಬಂಧಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಜಾಲದ ಇತರ ಸದಸ್ಯರು ಹಾಗೂ ಪ್ರಕರಣದ ಹೂಡಿಕೆದಾರರನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!
Scroll to Top