ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುತ್ತೂರು ಮಹಿಳಾ ಕಾಲೇಜಿನ ಪ್ರಾಂಶುಪಾಲರ ಅಮಾನತಿಗೆ ಸಂಬಂಧಿಸಿದ ಹಾಗೆ ಶಾಸಕ ರೈ ಅವರನ್ನು ತರಾಟೆಗೆ ತೆಗೆದು ಕೊಂಡಿರುವ ಅವರು, ಕಾಲೇಜಿನ ವಿದ್ಯಾರ್ಥಿನಿಯರು ತಮಗಾಗುತ್ತಿರುವ ಸಮಸ್ಯೆಗಳ ವಿರುದ್ಧ ನ್ಯಾಯಯುತವಾಗಿ ಪ್ರತಿಭಟನೆ ನಡೆಸಿದ್ದಕ್ಕೆ ಆ ಕಾಲೇಜಿನ ಪ್ರಭಾರ ಪ್ರಾಂಶುಪಾಲರನ್ನು ಅಮಾನತು ಮಾಡಿಸಲಾಗಿದೆ ಎಂದು ಹೇಳಿದ್ದಾರೆ.
ಮಕ್ಕಳ ಹಿತಾಸಕ್ತಿಗೆ ಸ್ಪಂದಿಸಿದ ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಬಲಿಪಶು ಮಾಡುವ ಬದಲು ನಿಯಮಗಳನ್ನು ಮುರಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತು ಶಾಸಕರಿಗೆ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಕಾಲೇಜು ಹಳೆ ಜೈಲು ಕಟ್ಟಡದಲ್ಲಿ ನಡೆಯುತ್ತಿದೆ. ಇಲ್ಲಿನ ಮಕ್ಕಳು ಕೇವಲ ಧೂಳಿನ ಸಮಸ್ಯೆ ಮಾತ್ರವನ್ನೇ ಅನುಭವಿಸುತ್ತಿರುವುದಲ್ಲ. ಬದಲಾಗಿ ಮೂಲಸೌಕರ್ಯಗಳ ಕೊರತೆಯಿಂದಲೂ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ತರಗತಿ ಕೋಣೆಗಳ ಕೊರತೆಯ ಜೊತೆಗೆ ಹಲವು ರೀತಿಯ ಕೊರತೆಗಳನ್ನು ಎದುರಿಸುತ್ತಿದ್ದಾರೆ. ಹಳೆಯ ಕಟ್ಟಡವಾಗಿರುವುದರಿಂದ ಕೋಣೆಗಳಲ್ಲಿ ಕತ್ತಲಿದ್ದು, ಫ್ಯಾನ್ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜೊತೆಗೆ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳಿಲ್ಲ ಮತ್ತು ಕಲಾ, ವಾಣಿಜ್ಯ, ಹಿಂದಿ, ಇಂಗ್ಲಿಷ್ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರ ತೀವ್ರ ಕೊರತೆ ಇದೆ. ಇಂತಹ ವಾಸ್ತವಿಕ ಸಮಸ್ಯೆಗಳನ್ನು ಮರೆಮಾಚಿ, ಸಮೀಪದಲ್ಲಿ ಕಾಮಗಾರಿ ನಡೆಸುವಾಗ ಧೂಳು ನಿಯಂತ್ರಣ ಮಾಡದ ಗುತ್ತಿಗೆದಾರರಿಗೆ ಕನಿಷ್ಠ ಎಚ್ಚರಿಕೆಯನ್ನೂ ನೀಡದೆ ಶಾಸಕರು ಮೃದು ಧೋರಣೆ ತಳೆದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಸರ್ಕಾರದ ಮುಂದೆ ತಪ್ಪು ಮಾಹಿತಿ ನೀಡಿ ಪ್ರಾಂಶುಪಾಲರನ್ನು ಅಮಾನತು ಮಾಡಿಸಿರುವುದು ಶಾಸಕರ ಆಡಳಿತ ವೈಫಲ್ಯ, ಒಣ ಪ್ರತಿಷ್ಠೆಗೆ ಹಿಡಿದ ಕೈಗನ್ನಡಿ ಎಂದು ಅವರು ವ್ಯಂಗ್ಯವಾಡಿದ್ದಾರೆ.
























