ತುಮಕೂರು: ಪತಿ ಮೃತಪಟ್ಚ ಕೆಲವೇ ದಿನಗಳಲ್ಲಿ ಪತ್ನಿ ಮತ್ತೊಂದು ಮದುವೆಯಾಗಿದ್ದು, ಇದರಿಂದ ಅನುಮಾನಗೊಂಡು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಘಟನೆ ದಾಸರಹಳ್ಳಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯ ಶವವನ್ನು 23 ದಿನಗಳ ಬಳಿಕ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪರಮೇಶ್ (50) ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಇದಾದ ಕೆಲವೇ ದಿನದಲ್ಲಿ ಅವರ ಪತ್ನಿ ಬೇರೊಂದು ಮದುವೆಯಾಗಿದ್ದು, ಕುಟುಂಬಸ್ಥರಲ್ಲಿ ಸಂದೇಹ ಸೃಷ್ಟಿಯಾಗುವಂತೆ ಮಾಡಿದೆ.
ಮೃತ ವ್ಯಕ್ತಿಯ ಸಹೋದರರಿಗೆ ತನ್ನ ಅಣ್ಣನಿಗೆ ಹೃದಯಾಘಾತವಾಗಿಲ್ಲ, ಆತನ ಮೂಗಿನ ನಡುವೆ ಗಾಯ ಇತ್ತು. ಗುಪ್ತಾಂಗ ಊದಿಕೊಂಡಿತ್ತು. ಇವೆಲ್ಲವನ್ನೂ ಗಮನಿಸಿ ಪೊಲಸರಿಗೆ ದೂರು ನೀಡಲಾಗಿತ್ತು. ದೂರು ಹಿನ್ನೆಲೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಹಸೀಲ್ದಾರ್ ರಾಜೇಶ್ವರಿ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅನುಮಾನಾಸ್ಪದ ಸಾವು ಪ್ರಕರಣವಾಗಿರುವುದರಿಂದ ವೈದ್ಯರು ಸಂಪೂರ್ಣ ಪರಿಶೀಲನೆ ನಡೆಸಲಿದ್ದು, ಮರಣೋತ್ತರ ಪರೀಕ್ಷೆಯ ವರದಿ ಒಂದು ವಾರದೊಳಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ನಂತರ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.
























