ಪುತ್ತೂರು: ಪುತ್ತೂರು ಮಹಿಳಾ ಕಾಲೇಜಿನ ಪ್ರಭಾರ ಪ್ರಾಂಶುಪಾಲರ ಅಮಾನತ್ತಿಗೆ ಸಂಬಂಧಿಸಿದ ಹಾಗೆ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿದ್ದು, ಶಾಸಕ ಅಶೋಕ್ ಕುಮಾರ್ ರೈ ಅವರ ಸೇಡಿಗೆ ಉದ್ದೇಶಪೂರ್ವಕವಾಗಿ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿನಿಯರು ತಮಗಾಗುತ್ತಿರುವ ಅನ್ಯಾಯಕ್ಕೆ ಪ್ರತಿಭಟನೆ ನಡೆಸಿದ್ದರು. ಈ ಕಾರಣಕ್ಕಾಗಿ ತಮ್ಮ ಸೇಡು ತೀರಿಸಿಕೊಳ್ಳಲು ಸರ್ಕಾರಕ್ಕೆ ಪತ್ರ ಬರೆದು ಪ್ರಾಂಶುಪಾಲರನ್ನೇ ಅಮಾನತು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳು ಪ್ರಬುದ್ಧರು. ಅವರ ಹಕ್ಕುಗಳನ್ನು ಕೇಳುವ ಸ್ವಾತಂತ್ರ್ಯ ಅವರಿಗೆ ಇದೆ. ಅದಕ್ಕೆ ಶಿಕ್ಷಕರು ಹೇಳಿಕೊಡುವ ಅಗತ್ಯ ಇಲ್ಲ. ಅವರಾಗಿಯೇ ತೀರ್ಮಾನ ಕೈಗೊಳ್ಳುವ ಶಕ್ತಿ ಇರುವವರು. ಆದರೆ ಶಾಸಕ ಅಶೋಕ್ ಕುಮಾರ್ ರೈ ಅವರು ವಿದ್ಯಾರ್ಥಿಗಳು ಉಪನ್ಯಾಸಕರಿಂದ ಪ್ರೇರಣೆ ಪಡೆದು ಪ್ರತಿಭಟನೆ ನಡೆಸಿದ್ದಾರೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಶಾಸಕರು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು. ನೀವು ಎಷ್ಟು ಬಾರಿ ಸಮಿತಿ ಸಭೆ ನಡೆಸಿ ಸಮಸ್ಯೆ ಆಲಿಸಿದ್ದೀರಿ ಎನ್ನುವುದು ಎಲ್ಲರಿಗೆ ಗೊತ್ತಿದೆ. ಸಭೆಯನ್ನು ನಡೆಸದೆ ಅಲ್ಲಿನ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಂಡಿಲ್ಲ. ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿರುವುದನ್ನು ನೀವು ಸಹಿಸದೆ, ನಿಮ್ಮ ವೈಫಲ್ಯವನ್ನು ಮುಚ್ಚಿ ಹಾಕಲು ಪ್ರಾಂಶುಪಾಲರ ವಿರುದ್ದವೇ ಕ್ರಮ ಜರಗಿಸುವ ಮೂಲಕ ಸರ್ವಾಧಿಕಾರಿ ಧೋರಣೆ ತಳೆದಿದ್ದೀರಿ ಎಂದು ಮಠಂದೂರು ಆರೋಪಿಸಿದ್ದಾರೆ.
ಪ್ರಭಾರ ಪ್ರಾಂಶುಪಾಲೆ ವೇದಶ್ರೀ ನಿಡ್ಯಾ ಅವರು ದಲಿತ ಸಮುದಾಯಕ್ಕೆ ಸೇರಿದವರು. ಅನಾರೋಗ್ಯದ ಕಾರಣದಿಂದ ಪುತ್ತೂರು ಮಹಿಳಾ ಕಾಲೇಜಿಗೆ ವರ್ಗಾವಣೆ ಆಗಿ ಬಂದಿದ್ದರು. ಅಂತಹವರ ಮೇಲೆ ಶಾಸಕರು ಪತ್ರ ಬರೆದು ಅಮಾನತು ಮಾಡಿರುವುದು ದುರದೃಷ್ಟಕರ. ಬಿಜೆಪಿ ಪಕ್ಷವೂ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಲಿದೆ. ವಿದ್ಯಾರ್ಥಿಗಳ ಪರ ನಿಲ್ಲಲಿದೆ ಎಂದು ಮಠಂದೂರು ಹೇಳಿದ್ದಾರೆ.
























