ತುಮಕೂರು: ನಾನು ಈ ಜಗತ್ತನ್ನೇ ಬಿಟ್ಟು ಹೋಗುತ್ತೇನೆ, ನೀನು ಚೆನ್ನಾಗಿರು ಎಂದು ಸ್ಟೇಟಸ್ ಹಾಕಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ತುರುವೇಕೆರೆಯಲ್ಲಿ ಡಿಪ್ಲೋಮಾ ಓದುತ್ತಿದ್ದ ವಿದ್ಯಾರ್ಥಿ, ಗೋಪ್ಪೇನಹಳ್ಳಿ ಗ್ರಾಮದ ಧನುಷ್(19) ಮೃತ ಯುವಕ. ಈತ ದ್ವಿತೀಯ ವರ್ಷದ ಡಿಪ್ಲೊಮಾ ವಿದ್ಯಾರ್ಥಿ.
ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಧನುಷ್ ಎಷ್ಟು ಹೊತ್ತಾದರೂ ಮನೆಗೆ ಬಂದಿಲ್ಲ. ಮನೆಯಿಂದ ಫೋನ್ ಮಾಡಿದಾಗಲೂ ಅದಕ್ಕೆ ಉತ್ತರಿಸಿಲ್ಲ. ಇದರಿಂದ ಗಾಬರಿಯಾದ ಮನೆಯವರು ಹುಡುಕಾಟ ನಡೆಸಿದ್ದಾರೆ.
ಈತ ತನ್ನ ಮೊಬೈಲ್‌ನಲ್ಲಿ ನಾನು ಈ ಜಗತ್ತನ್ನೇ ಬಿಟ್ಟು ಹೋಗುತ್ತೇನೆ, ನೀನು ಚೆನ್ನಾಗಿರು ಎಂದು ಸ್ಟೇಟಸ್ ಹಾಕಿದ್ದು ಅನುಮಾನಕ್ಕೆ ಕಾರಣವಾಗಿತ್ತು. ಹುಡುಕಾಟದ ಸಂದರ್ಭದಲ್ಲಿ ಆತನ ಬ್ಯಾಗ್, ಚಪ್ಪಲಿ, ಮೊಬೈಲ್ ಕಾಲೇಜಿನ ಹಿಂಬದಿಯಲ್ಲಿ ಪತ್ತೆಯಾಗಿದ್ದು, ಅಲ್ಲೇ ಹುಡುಕಾಟ ನಡೆಸಲಾಗಿದೆ. ಈ ವೇಳೆ ಅಗ್ನಿಶಾಮಕ ದಳ ಕ್ಕೆ ನೀರಿನ ಕಟ್ಟೆಯಲ್ಲಿ ಮೃತ ದೇಹ ಸಿಕ್ಕಿದೆ.
ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























