ಮಂಗಳೂರು: ನಗರದ ಬಾಬುಗುಡ್ಡೆಯ ಸಮೀಪದಲ್ಲಿ ಅಪ್ರಾಪ್ತ ಬಾಲಕನೊಬ್ಬನ ಮೇಲೆ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಪ್ರಾಪ್ತ ಹುಡುಗ ಫೆ. 23 ರಂದು ತನ್ನ ಸ್ನೇಹಿತೆಯ ಜೊತೆಗೆ ರೈಲ್ವೆ ಟ್ರಾಕ್ ಸಮೀಪ ಕುಳಿತು ಮಾತನಾಡುತ್ತಿದ್ದ. ಈ ವೇಳೆ ಅವರಿಬ್ಬರ ವಿಡಿಯೋ ಮಾಡುತ್ತಾ ಸ್ಟೀವನ್ ಮೊಂತೆರೋ ಮತ್ತು ಅವರ ಪುತ್ರ ಅವಿಲ್ ಅಲ್ಲಿಗೆ ಬಂದಿದ್ದಾರೆ. ಅಪ್ರಾಪ್ತ ಹುಡುಗ ಮತ್ತು ಅವನ ಸ್ನೇಹಿತೆಗೆ ‘ನೀವಿಲ್ಲಿ ಕಿಸ್ಸಿಂಗ್ ಮಾಡುತ್ತಿದ್ದ ತೀರಾ, ನಾನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ’ ಎಂಬುದಾಗಿ ಹೆದರಿಸಿದ್ದಾರೆ.
ಈ ವೇಳೆ ಸ್ನೇಹಿತೆ ಅಲ್ಲಿಂದ ತೆರಳಿದ್ದು, ಆ ಬಳಿಕ ಅಪ್ರಾಪ್ತನಿಗೆ ಇಬ್ಬರೂ ಆರೋಪಿಗಳು ನಿಂದಿಸಿ, ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ಹೇಳಲಾಗಿದೆ. ಜಾತಿ ವಿಚಾರದಲ್ಲೂ ನಿಂದನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ಘಟನೆಗೆ ಸಂಬಂಧಿಸಿದ ಹಾಗೆ ವಾಟ್ಸಾಪ್ ಮೂಲಕವೂ ವಿಡಿಯೋ ಹರಿಯಬಿಟ್ಟಿರುವುದಾಗಿ ದೂರಿನಲ್ಲಿ ಹೇಳಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
























