ಭಾರತದ ಪ್ರಧಾನಿ ಭೇಟಿಗೆ ಇಸ್ರೇಲ್‌ನಲ್ಲಿ ಸಡಗರ; ಸಂಸತ್ತಿನ ತ್ರಿವರ್ಣ ದೀಪಾಲಂಕಾರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕಾಲ ಇಸ್ರೇಲ್ ಪ್ರವಾಸ ಕೈಗೊಂಡಿದ್ದಾರೆ. ಮೋದಿ ಆಗಮನಕ್ಕೂ ಮುನ್ನ ಇಸ್ರೇಲ್ ಸಂಸತ್‌ನಲ್ಲಿ ತ್ರಿವರ್ಣ ದೀಪಗಳು ಕಂಗೊಳಿಸಿವೆ. ಪ್ರಧಾನಿ ಮೋದಿ ಫೆಬ್ರವರಿ 26ರಂದು ಇಸ್ರೇಲ್ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದು, ಅಲ್ಲಿನ ಪ್ರಮುಖ ಪತ್ರಿಕೆ ಜೆರುಸಲೇಂ ಪೋಸ್ಟ್ನ ಮುಖಪುಟದಲ್ಲಿ ಪ್ರಧಾನಿಯದ್ದೇ ಸುದ್ದಿ ಪ್ರಕಟವಾಗಿದೆ. ಇದೇ ವೇಳೆ ಭಾರತದಲ್ಲಿ ಮೋದಿಯ ಇಸ್ರೇಲ್ ಭೇಟಿಯನ್ನು ಕಾಂಗ್ರೆಸ್ ಸೇರಿದಂತೆ ಒಂದು ವರ್ಗ ವಿರೋಧಿಸುತ್ತಿದೆ. ಇದರಿಂದ ಪ್ಯಾಲೆಸ್ತೀನ್ ವಿಚಾರಕ್ಕೆ ಧಕ್ಕೆಯಾಗಬಹುದು ಎನ್ನುವುದು ಅವರ ವಾದ.

ಇದಕ್ಕೂ ಮೊದಲು ಮಾಜಿ ರಾಷ್ಟ್ರಪತಿ ದಿ.ಪ್ರಣಬ್ ಮುಖರ್ಜಿ 2015ರಲ್ಲಿ ಇಸ್ರೇಲ್ ಸಂಸತ್ತನ್ನುದ್ದೇಶಿಸಿ ಮಾತನಾಡಿದ್ದರು. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಉತ್ತುಂಗದಲ್ಲಿರುವ ಸಮಯದಲ್ಲಿ ಮೋದಿಯ ಭೇಟಿ ತುಂಬಾ ಮಹತ್ವದ್ದಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ತೆರಳುತ್ತಿದ್ದಾರೆ.
ಇಸ್ರೇಲ್ ಸಂಸತ್ತಿನ ಸ್ಪೀಕರ್ ಅಮೀರ್ ಒಹಾನಾ ನೆಸ್ಸೆಟ್‌ನ ಫೋಟೋವನ್ನು ಹಂಚಿಕೊಂಡು, ಇಂದು ರಾತ್ರಿ, ನೆಸ್ಸೆಟ್ ಅನ್ನು ಭಾರತೀಯ ಧ್ವಜದ ಬಣ್ಣಗಳಲ್ಲಿ ಬೆಳಗಿಸಲಾಗುತ್ತದೆ, ಇದು ಪ್ರಧಾನಿ ಮೋದಿಗೆ ನಾವು ಕೊಡುತ್ತಿರುವ ಗೌರವ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯವರ ಭೇಟಿಯನ್ನು ಇಸ್ರೇಲ್ ಸಂಸತ್ತು, ನೆಸ್ಸೆಟ್‌ನಿಂದ ಹಿಡಿದು ಪ್ರಮುಖ ಪತ್ರಿಕೆಗಳವರೆಗೆ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ.
ದಿ ಜೆರುಸಲೇಂ ಪೋಸ್ಟ್ನಲ್ಲಿ ಹಿಂದಿ ಹಾಗೂ ಹಿಬ್ರೂ ಭಾಷೆಯಲ್ಲಿ ನಮಸ್ತೆ ಎಂದು ತನ್ನ ಮುಖಪುಟದಲ್ಲಿ ನಮಸ್ತೆ ಎಂದು ಬರೆದಿದ್ದು ಎರಡು ಪ್ರಾಚೀನ ರಾಷ್ಟ್ರಗಳು ಹೊಸ ಅಧ್ಯಾಯವನ್ನು ಪ್ರಾರಂಭಿಸಲಿವೆ ಎಂದು ಬರೆಯಲಾಗಿದೆ.
ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಮತ್ತು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರನ್ನು ಸಹ ಭೇಟಿ ಮಾಡಲಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ, ನಾವೀನ್ಯತೆ, ರಕ್ಷಣೆ ಮತ್ತು ಭದ್ರತೆ, ಕೃಷಿ, ನೀರು ನಿರ್ವಹಣೆ, ವ್ಯಾಪಾರ ಮತ್ತು ಆರ್ಥಿಕತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರದ ಅವಕಾಶಗಳ ಕುರಿತು ಚರ್ಚಿಸಲಿದ್ದಾರೆ.
ಭಾರತ ಮತ್ತು ಇಸ್ರೇಲ್ ದೀರ್ಘಕಾಲದಿಂದ ವಿಶ್ವಾಸಾರ್ಹ ಪಾಲುದಾರರಾಗಿದ್ದು, ಹಲವಾರು ಬಿಕ್ಕಟ್ಟುಗಳ ಸಮಯದಲ್ಲಿ ಈ ವಿಶ್ವಾಸವನ್ನು ಸಾಬೀತುಪಡಿಸಲಾಗಿದೆ. ಈ ಒಪ್ಪಂದವು ಭಾರತ-ಇಸ್ರೇಲ್ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಮಟ್ಟಕ್ಕೆ ಏರಿಸುವ, ಭದ್ರತೆ, ರಕ್ಷಣೆ ಮತ್ತು ಕಾರ್ಯತಂತ್ರದ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ.
























