ಲಕ್ನೋ: ಉತ್ತರ ಪ್ರದೇಶದಲ್ಲಿ ಮಗನೇ ತಂದೆಯನ್ನು ಗುಂಡಿಕ್ಕಿ ಕೊಂದು, ದೇಹವನ್ನು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಮನ್ವೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಆತನ ಪುತ್ರ ಅಕ್ಷತ್ ಪ್ರತಾಪ್ ಸಿಂಗ್ ಎಂಬಾತನೇ ಆರೋಪಿ. ಮನ್ವೇಂದ್ರ ಅವರು ಔಷಧ ಮತ್ತು ಮದ್ಯದ ಉದ್ಯಮ ನಡೆಸುತ್ತಿದ್ದರು. ಅವರು ತಮ್ಮ ಮಗನನ್ನು ಡಾಕ್ಟರ್ ಆಗುವಂತೆ ಒತ್ತಾಯಿಸುತ್ತಿದ್ದರು. ಈ ವಿಚಾರವಾಗಿ ತಂದೆ ಮತ್ತು ಮಗನ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಈ ವಿಷಯದಲ್ಲೇ ಮಗ ಮನೆಯಿಂದ ನಾಪತ್ತೆಯಾಗಿದ್ದು, ಮತ್ತೆ ಮನೆಗೆ ಬಂದು ತಂದೆಯನ್ನು ಗುಂಡಿಕ್ಕಿ ಹತ್ಯೆ ಮಾಡಿ, ದೇಹವನ್ನು ಕತ್ತರಿಸಿ ಬ್ಯಾರಲ್‌ನ ನೆಲಮಾಳಿಗೆಯಲ್ಲಿ ಇರಿಸಿದ್ದಾನೆ. ಈ ವೇಳೆ ತಾಯಿ ಮನೆಯಲ್ಲಿ ಇರಲಿಲ್ಲ. ಸಹೋದರಿ ಮನೆಯಲ್ಲೇ ಇದ್ದರೂ ಆಕೆಯನ್ನು ಬೆದರಿಸಿಟ್ಟಿದ್ದ ಎಂದು ತಿಳಿದು ಬಂದಿದೆ.
ಶವ ಪತ್ತೆಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
























