ಮಾ.11ರಿಂದ ಸರ್ಕಾರಿ ವೈದ್ಯರ ಪ್ರತಿಭಟನೆ : ವೈದ್ಯಕೀಯ ಸೇವೆ ವ್ಯತ್ಯಯವಾಗುವ ಸಾಧ್ಯತೆ

ಆಸ್ಪತ್ರೆಗಳಿಗೆ ಔಷಧ ಸಮರ್ಪಕ ಪೂರೈಕೆ, ನೇಮಕಾತಿ ನಿಯಮ ತಿದ್ದುಪಡಿ ಬೇಡಿಕೆ

ಬೆಂಗಳೂರು : ವರ್ಗಾವಣೆ ನೀತಿ ಬದಲಾವಣೆ, ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ವೈದ್ಯರು ಮಾರ್ಚ್ 11 ರಿಂದ 15 ರವರೆಗೆ ಹೊರ ರೋಗಿಗಳ ಸೇವೆಯನ್ನು (ಒಪಿಡಿ) ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ.ರವೀಂದ್ರನಾಥ್ ಎಂ.ಮೇಟಿ ಮಾಹಿತಿ ನೀಡಿದರು.

ರಾಜ್ಯ ಸರ್ಕಾರ ಪ್ರತಿಭಟನೆಗೆ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಮಾರ್ಚ್ 16 ರಿಂದ ಆರೋಗ್ಯ ಇಲಾಖೆಯ ಎಲ್ಲ ವೈದ್ಯರು, ಅಧಿಕಾರಿ-ನೌಕರರು ಕರ್ತವ್ಯಕ್ಕೆ ಅನಿರ್ದಿಷ್ಟಾವಧಿವರೆಗೆ ಗೈರಾಗುವ ಮೂಲಕ ಮುಷ್ಕರ ಮುಂದುವರಿಸುತ್ತೇವೆ ಎಂದು ತಿಳಿಸಿದರು.





















































 
 

ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಉಂಟಾಗುತ್ತಿದ್ದು ಸಮರ್ಪಕವಾಗಿ ಔಷಧ ಸರಬರಾಜು ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ತಿದ್ದುಪಡಿ ಮಾಡಬೇಕು. ಆದರೆ, ಸರ್ಕಾರಿ ಆದೇಶ ಉಲ್ಲಂಘಿಸಿ 1973ರಿಂದ ಇಲ್ಲಿಯವರೆಗೆ ಆರೋಗ್ಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿಲ್ಲ. ಈ ಬಗ್ಗೆ ಶೀಘ್ರ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.

ಇಲಾಖೆಯ ಎಲ್ಲ ವೃಂದಗಳ ಜ್ಯೇಷ್ಠತಾ ಪಟ್ಟಿಯನ್ನು ಕಾಲಕಾಲಕ್ಕೆ ಪ್ರಕಟಿಸಬೇಕು. ಗುತ್ತಿಗೆ ವೈದ್ಯರು, ನೌಕರರು ಹಾಗೂ ಎನ್‌ಎಚ್‌ಎಂ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಮತ್ತು ಕಾಲಕಾಲಕ್ಕೆ ಸೂಕ್ತ ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮಾರ್ಚ್ 11 ರಿಂದ 15ರ ತನಕ ರಾಜ್ಯದ ಎಲ್ಲ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡಲಿದ್ದಾರೆ. ಈ ಅವಧಿಯಲ್ಲಿ OPD (ಹೊರರೋಗಿ ಸೇವೆ) ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಸರ್ಕಾರ ಅಷ್ಟರೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಮಾರ್ಚ್ 16ರಿಂದ ವೈದ್ಯರು ಕೆಲಸಕ್ಕೆ ಗೈರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ.

error: Content is protected !!
Scroll to Top