ಏರ್‌ ಆಂಬುಲೆನ್ಸ್‌ ಪತನಗೊಂಡು ಏಳು ಮಂದಿ ಸಾವು

ಗಾಯಾಳುವನ್ನು ತುರ್ತು ಚಿಕಿತ್ಸೆಗಾಗಿ ಕೊಂಡೊಯ್ಯುತ್ತಿದ್ದ ಖಾಸಗಿ ಏರ್‌ ಆಂಬುಲೆನ್ಸ್‌ ಪತನ

ಹೊಸದಿಲ್ಲಿ: ಜಾರ್ಖಂಡ್‌ನ ಚಾತ್ರ ಜಿಲ್ಲೆಯ ಸಿಮಾರಿಯಾ ಎಂಬಲ್ಲಿ ಸೋಮವಾರ ಸಂಜೆ ಏರ್‌ ಆಂಬುಲೆನ್ಸ್‌ ಪತನಗೊಂಡು ಅದರಲ್ಲಿದ್ದ ಎಲ್ಲ ಏಳು ಮಂದಿ ಮೃತಪಟ್ಟಿದ್ದಾರೆ. ಅಪಘಾತಕ್ಕೀಡಾದ ಏರ್ ಆ್ಯಂಬುಲೆನ್ಸ್‌ನಲ್ಲಿದ್ದ ಎಲ್ಲ ಏಳು ಮಂದಿ ಮೃತಪಟ್ಟಿದ್ದಾರೆ. ವಿಮಾನ ರಾಂಚಿಯಿಂದ ದೆಹಲಿಗೆ ತೆರಳುತ್ತಿತ್ತು ಎಂದು ಚಾತ್ರ ಜಿಲ್ಲಾಧಿಕಾರಿ ಕೀರ್ತಿಶ್ರೀ ಜಿ ಹೇಳಿದ್ದಾರೆ.

ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದ್ದ ಬೀಚ್ಕ್ರಾಫ್ಟ್ ಸಿ90 (ವಿಐ-ಎಜೆವಿ) ರಾಂಚಿ ವಿಮಾನ ನಿಲ್ದಾಣದಿಂದ ರಾತ್ರಿ 7.11ಕ್ಕೆ ಟೇಕಾಫ್‌ ಆಗಿತ್ತು. 7.30ರ ವೇಳೆಗೆ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿದ್ದ ವಿಮಾನ ಸಿಮಾರಿಯಾ ಬಳಿಯ ಬರಿಯಾಟ್ ಪಂಚಾಯತ್‌ ಪ್ರದೇಶದಲ್ಲಿ ದಟ್ಟ ಕಾಡಿನ ಒಳಗೆ ಅಪಘಾತಕ್ಕೀಡಾಗಿತ್ತು.





















































 
 

ಮೃತಪಟ್ಟ ಎಲ್ಲ ಏಳು ಮಂದಿಯ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಕ್ಯಾಪ್ಟನ್ ಸೌರಜ್‌ದೀಪ್ ಸಿಂಗ್, ಸಂಜಯ್ ಕುಮಾರ್, ಡಾ.ವಿಕಾಸ್ ಕುಮಾರ್ ಗುಪ್ತಾ, ಸಚಿನ್ ಕುಮಾರ್ ಮಿಶ್ರಾ, ಅರ್ಚನಾದೇವಿ ಮತ್ತು ಧುರು ಕುಮಾರ್ ಮೃತ ದುರ್ದೈವಿಗಳು. ಎಂದು ಎಸ್ಡಿಪಿಒ ಶುಭಂ ಖಂಡೇವಾಲ್ ತಿಳಿಸಿದ್ದಾರೆ.

ರಾಡಾರ್ ಸಂಪರ್ಕ ಕಡಿದುಕೊಳ್ಳುವ ಮುನ್ನ ಈ ವಿಮಾನ ಕೋಲ್ಕತ್ತಾ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ರಾತ್ರಿ 7.34ಕ್ಕೆ ಸಂಪರ್ಕಿಸಿತ್ತು. ಹವಾಮಾನ ವೈಪರೀತ್ಯ ಪರಿಸ್ಥಿತಿಯಿಂದಾಗಿ ಬೇರೆ ಮಾರ್ಗವಾಗಿ ತೆರಳಲು ಮನವಿ ಮಾಡಿಕೊಂಡ ತಕ್ಷಣವೇ ಸಂಪರ್ಕ ಕಡಿತಗೊಂಡಿತು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿವರಿಸಿದೆ.

ಟೇಕಾಫ್ ಆದ 20 ನಿಮಿಷಗಳಲ್ಲಿ ವಿಮಾನ ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ ಸಂಪರ್ಕ ಕಡಿದುಕೊಂಡಿತ್ತು ಎಂದು ರಾಂಚಿ ವಿಮಾನ ನಿಲ್ದಾಣ ನಿರ್ದೇಶಕ ವಿನೋದ್ ಕುಮಾರ್ ಹೇಳಿದ್ದಾರೆ. ಪ್ರತಿಕೂಲ ಹವಾಮಾನ ದುರಂತಕ್ಕೆ ಕಾರಣವಾಗಿರಬೇಕು. ಆದರೆ ತನಿಖೆಯ ಬಳಿಕ ನೈಜ ಕಾರಣ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.

ರೆಡ್ ಬರ್ಡ್ ಏರ್‌ವೇಸ್ ನಿರ್ವಹಿಸುತ್ತಿದ್ದ ಈ ಏರ್ ಆ್ಯಂಬುಲೆನ್ಸ್ ರಾಂಚಿ ಹಾಗೂ ದಿಲ್ಲಿ ನಡುವೆ ಹಾರಾಟ ನಡೆಸುತ್ತಿತ್ತು. ಅಪಘಾತಕ್ಕೀಡಾದ ವಿಮಾನದಲ್ಲಿ ರೋಗಿ, ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ವಿಮಾನದ ಸಿಬ್ಬಂದಿ ಇದ್ದರು. ಸಂಜಯ್ ಕುಮಾರ್ ಎಂಬವರನ್ನು ಸುಟ್ಟಗಾಯಗಳ ಚಿಕಿತ್ಸೆಗಾಗಿ ದಿಲ್ಲಿಗೆ ಕರೆದೊಯ್ಯುವಾಗ ಅಪಘಾತ ಸಂಭವಿಸಿದೆ.

error: Content is protected !!
Scroll to Top