ಕಾಡಾನೆ ದಾಳಿಯ ವಿರುದ್ಧ ಪ್ರತಿಭಟಿಸುತ್ತಿದ್ದವರ ಮೇಲೆ ಲಾಠಿ ಚಾರ್ಜ್
ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದ ಪ್ರಕರಣ ಸಂಬಂಧ ಸರ್ಕಾರ, ಅರಣ್ಯ ಇಲಾಖೆ ವಿರುದ್ಧ ನಡೆಸಿದ ಪ್ರತಿಭಟನೆ ವೇಳೆ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ ಇಂದು (ಫೆ.23) ಶೃಂಗೇರಿ, ಎನ್.ಆರ್.ಪುರ, ಕೊಪ್ಪ, ಖಾಂಡ್ಯ ಹೋಬಳಿ ಬಂದ್ಗೆ ಕರೆ ನೀಡಲಾಗಿದೆ.
ರೈತ ಸಂಘಟನೆಗಳು ಬೆಳಗ್ಗೆ 8ರಿಂದ ಸಂಜೆ 5ರತನಕ ಬಂದ್ಗೆ ಕರೆ ನೀಡಿದ್ದು, ನಾಗರಿಕ ಹಿತ ರಕ್ಷಣಾ ವೇದಿಕೆ, ರೈತ ಒಕ್ಕೂಟ, ಆಟೋ ಚಾಲಕ-ಮಾಲೀಕರ ಸಂಘ, ಬಿಜೆಪಿ ಬಂದ್ಗೆ ಬೆಂಬಲ ನೀಡಿವೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇನ್ನುಳಿದಂತೆ ಎಲ್ಲ ಚಟುವಟಿಕೆಗಳು ಬಂದ್ ಆಗಿದ್ದು, ಬೆಳಗ್ಗೆ 11 ಗಂಟೆಗೆ ಬಾಳೆಹೊನ್ನೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.
ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಿದ್ದು, ಸರ್ಕಾರದ ವಿರುದ್ಧ ಹೋರಾಟ ಇಂದೂ ಕೂಡ ಮುಂದುವರಿಯಲಿದೆ. ಒಂದು ವರ್ಷದಲ್ಲಿ ಕಾಡುಪ್ರಾಣಿಗಳ ದಾಳಿಗೆ 13 ಮಂದಿ ಬಲಿಯಾಗಿದ್ದು, ಒಂದು ವಾರದ ಅಂತರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹೀಗಿದ್ದರೂ ಕೂಡ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದು, ಮಲೆನಾಡಿಗರಿಗೆ ಸ್ವಾಂತನ ಹೇಳುವುದಕ್ಕೂ ಬರುತ್ತಿಲ್ಲ ಎಂದು ಜನ ಕಿಡಿ ಕಾರಿದ್ದಾರೆ.
ಕಾಡುಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುತ್ತಿದ್ದರೂ ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಕಾಡುಪ್ರಾಣಿಗಳು ನಿರಂತರ ದಾಳಿ ಮಾಡುತ್ತಿದ್ದರೂ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಆನೆ ಶಿಬಿರ, ರೈಲ್ವೆ ಬ್ಯಾರಿಕೇಡ್ ಘೋಷಣೆಗೆ ಮಾತ್ರ ಸೀಮಿತನಾ? ನಿಮ್ಮ ಸಿದ್ಧ ಉತ್ತರ, ಸಬೂಬು ಬೇಡ, ಶಾಶ್ವತ ಪರಿಹಾರ ಬೇಕೆಂದು ಆಗ್ರಹಿಸಿದ್ದಾರೆ.
























