ಅಫ್ಘಾನಿಸ್ತಾನ ಮೇಲೆ ಪಾಕಿಸ್ತಾನ ದಾಳಿ : ಮಕ್ಕಳು ಸೇರಿ ಕನಿಷ್ಠ 17 ನಾಗರಿಕರು ಸಾವು

ಆತ್ಮಾಹುತಿ ಬಾಂಬ್‌ ದಾಳಿಗೆ ಪ್ರತೀಕಾರ ಎಂದು ಹೇಳಿಕೊಂಡ ಪಾಕಿಸ್ತಾನ

ಕಾಬೂಲ್:‌ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ 17 ನಾಗರಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಪ್ರದೇಶದ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ವಾಯುಪಡೆ ವೈಮಾನಿಕ ದಾಳಿ ನಡೆಸಿದೆ. ಪಾಕಿಸ್ತಾನದಲ್ಲಿ ಇತ್ತೀಚಿಗೆ ನಡೆದ ಆತ್ಮಹತ್ಯಾ ದಾಳಿಗೆ ಅಫ್ಘಾನ್ ಮೂಲದ ಭಯೋತ್ಪಾದಕ ಗುಂಪು ಕಾರಣ ಎಂದು ಆರೋಪಿಸಿ ಪಾಕಿಸ್ತಾನ ಈ ದಾಳಿಯನ್ನು ನಡೆಸಿದೆ.

ಶನಿವಾರ ರಾತ್ರಿ ಪಾಕ್‌ ವಾಯುಪಡೆ ನಂಗರ್‌ಹಾರ್ ಮತ್ತು ಪಕ್ತೂನ್‌ಖ್ವಾ ಪ್ರಾಂತ್ಯಗಳಲ್ಲಿ ನಮ್ಮ ನಾಗರಿಕರ ಮೇಲೆ ಬಾಂಬ್ ದಾಳಿ ನಡೆಸಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಡಜನ್‌ಗಟ್ಟಲೆ ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.





















































 
 

ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಅವರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ದಾಳಿ ವಿಚಾರವನ್ನು ದೃಢಪಡಿಸಿದ್ದಾರೆ. ಕಳೆದ ವಾರ ರಂಜಾನ್ ಆರಂಭವಾದಾಗಿನಿಂದ ಮೂರು ದಾಳಿಗಳನ್ನು ಉಲ್ಲೇಖಿಸಿದ್ದಾರೆ. ಪಾಕಿಸ್ತಾನ ಗುಪ್ತಚರ ಮಾಹಿತಿ ಆಧಾರಿಸಿ ಪಾಕಿಸ್ತಾನಿ ತಾಲಿಬಾನ್ ಮತ್ತು ಅದರ ಅಂಗಸಂಸ್ಥೆಗಳಿಗೆ ಸೇರಿದ ಏಳು ಭಯೋತ್ಪಾದಕ ಶಿಬಿರಗಳು ಮತ್ತು ಅಡಗುತಾಣಗಳನ್ನು ಗಡಿ ಪ್ರದೇಶದಲ್ಲಿ ದಾಳಿ ನಡೆಸಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಇತ್ತೀಚೆಗೆ 31 ಜನರು ಸಾವನ್ನಪ್ಪಿ, 160ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದ ಮಸೀದಿಯ ಮೇಲಿನ ದಾಳಿಯ ಹೊಣೆಯನ್ನು ಹೊತ್ತಿದ್ದ ಇಸ್ಲಾಮಿಕ್ ಸ್ಟೇಟ್ ಗುಂಪಿನ ಅಂಗಸಂಸ್ಥೆಯನ್ನು ಪಾಕಿಸ್ತಾನ ಟಾರ್ಗೆಟ್‌ ಮಾಡಿದೆ ಎಂದು ತರಾರ್ ಹೇಳಿದ್ದಾರೆ. 2008ರ ಮ್ಯಾರಿಯಟ್ ಹೋಟೆಲ್ ಬಾಂಬ್ ದಾಳಿಯ ನಂತರ ಇಸ್ಲಾಮಾಬಾದ್‌ನಲ್ಲಿ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದಾಗಿದೆ.

ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಭಯೋತ್ಪಾದಕ ಗುಂಪುಗಳು ಮತ್ತು ವಿದೇಶಿ ಪ್ರಾಕ್ಸಿಗಳು ಅಫ್ಘಾನ್ ಭೂಪ್ರದೇಶವನ್ನು ಬಳಸುವುದನ್ನು ತಡೆಯಲು ಕ್ರಮಕೈಗೊಳ್ಳುವಂತೆ ಅಫ್ಘಾನಿಸ್ತಾನಕ್ಕೆ ಒತ್ತಾಯಿಸಲಾಗಿದೆ. ಅಫ್ಘಾನ್ ತಾಲಿಬಾನ್ ಆಡಳಿತವು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಪಾಕಿಸ್ತಾನಿ ಸೇನೆ ಆರೋಪಿಸಿದೆ.

error: Content is protected !!
Scroll to Top