ರೈಲು ಹಳಿಯಲ್ಲಿ ಮಲಗಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ
ಬೆಂಗಳೂರು: ಹಾಸನ ನಗರದ ಕರೀಗೌಡ ಕಾಲೋನಿಯಲ್ಲಿ ವೃದ್ಧರಿಬ್ಬರ ಶವ ರೈಲು ಹಳಿಯಲ್ಲಿ ಪತ್ತೆಯಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ವೃದ್ಧ ಮಹಿಳೆ ಮತ್ತು ಪುರುಷನ ಮೃತದೇಹ ರೈಲು ಹಳಿಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಕಂಡುಬಂದಿದೆ. ಅವರ ಮೇಲೆ ರೈಲು ಹರಿದು ಹೋಗಿದೆ. ಇವರು ವೃದ್ಧ ದಂಪತಿ ಆಗಿರಬೇಕೆಂದು ಶಂಕಿಸಲಾಗಿದೆ. ಪ್ರಾಥಮಿಕವಾಗಿ ಇದು ಆತ್ಮಹತ್ಯೆಯಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕತ್ತಲಿನ ವೇಳೆ ಘಟನೆ ನಡೆದಿರಬಹುದೆಂದು ತಿಳಿದುಬಂದಿದೆ.
ರೈಲು ಹರಿದ ರಭಸಕ್ಕೆ ದಂಪತಿಯ ದೇಹಗಳು ತುಂಡಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯರು ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವೃದ್ಧರ ಗುರುತು ಇನ್ನೂ ಪತ್ತೆಯಾಗಿಲ್ಲ. ಪ್ರಾಥಮಿಕ ಪರಿಶೀಲನೆಯಲ್ಲಿ ಹಳಿಯ ಮೇಲೆ ಮಲಗಿರುವ ಸ್ಥಿತಿಯಲ್ಲೇ ರೈಲು ಚಕ್ರಗಳು ಹರಿದಿರುವುದು ಕಂಡುಬಂದಿದೆ. ಅವರು ನಡೆದುಕೊಂಡು ಹೋಗುವ ವೇಳೆ ಅಪಘಾತವಾಗಿದ್ದರೆ ದೇಹಗಳು ದೂರಕ್ಕೆ ತೂರಲ್ಪಡುತ್ತಿದ್ದರು. ಆದರೆ ದೇಹಗಳ ಸ್ಥಿತಿಗತಿಗಳನ್ನು ಗಮನಿಸಿದರೆ ಆತ್ಮಹತ್ಯೆಯ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
























