ಯೂಟ್ಯೂಬರ್ಸ್, ರೀಲ್ಸ್ ಮಾಡುವವರ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಮ
ಬೆಂಗಳೂರು : ಇನ್ನು ಮುಂದೆ ದೇವಸ್ಥಾನಗಳಲ್ಲಿ ರೀಲ್ಸ್ ಮತ್ತಿತರ ಉದ್ದೇಗಳಿಗೆ ಶೂಟಿಂಗ್ ಮಾಡಬೇಕಾದರೆ ಶುಲ್ಕ ಪಾವತಿಸಬೇಕು. ರಾಜ್ಯದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ರೀಲ್ಸ್ ಮತ್ತು ವೀಡಿಯೋ ಶೂಟಿಂಗ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ನಿಯಮಗಳನ್ನು ಜಾರಿಗೆ ತರುವ ನಿರ್ಧಾರ ಮಾಡಿದೆ. ದೇವಸ್ಥಾನಗಳಲ್ಲಿ ಚಿತ್ರೀಕರಣ ಮಾಡಬೇಕಾದರೆ ಆಯ್ಕೆ ಮಾಡಿದ ಸ್ಥಳಗಳಲ್ಲಿ ಮಾತ್ರ ಅವಕಾಶ ದೊರೆಯಲಿದೆ ಮತ್ತು ಅದಕ್ಕಾಗಿ ಶುಲ್ಕ ಕಡ್ಡಾಯವಾಗಲಿದೆ.
ರಾಜ್ಯದ ಎಲ್ಲ ಎ ಮತ್ತು ಬಿ ವರ್ಗದ ಮುಜರಾಯಿ ದೇವಾಲಯಗಳಲ್ಲಿ ಈ ನಿಯಮ ಅನ್ವಯವಾಗಲಿದೆ. ಸಿನಿಮಾ, ಧಾರಾವಾಹಿ, ಸಾಕ್ಷ್ಯಚಿತ್ರ, ಯೂಟ್ಯೂಬ್ ಚಾನೆಲ್ ಹೀಗೆ ವಿವಿಧ ಪ್ರಕಾರದ ಚಿತ್ರೀಕರಣಕ್ಕೆ ಶೂಟಿಂಗ್ ಶುಲ್ಕ ಪಾವತಿಸುವುದು ಕಡ್ಡಾಯವಾಗುತ್ತದೆ ಎಂದು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
2003 ಮತ್ತು 2013ರಲ್ಲಿ ನಿಗದಿತ ಶುಲ್ಕ ಪಾವತಿಸಿ ಶೂಟಿಂಗ್ ಮಾಡಲು ನಿಯಮ ಜಾರಿಗೆ ಬಂದಿದೆ. ಆದರೆ ಇತ್ತೀಚೆಗೆ ದೇವಸ್ಥಾನಗಳಲ್ಲಿ ರೀಲ್ಸ್, ಯೂಟ್ಯೂಬ್ ಚಾನೆಲ್ ಚಿತ್ರೀಕರಣಗಳು ಹೆಚ್ಚಿದ ಪರಿಣಾಮ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ಬರುತ್ತಿದೆ. ಹೀಗಾಗಿ ಮುಜರಾಯಿ ಇಲಾಖೆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದೆ.
ಮುಖ್ಯ ಉದ್ದೇಶ ಹಣ ಸಂಗ್ರಹಿಸುವುದು ಅಲ್ಲ, ಯಾರೋ ಬಂದು ಏನೆನೋ ವಿಡಿಯೋ ಮಾಡುವುದನ್ನು ತಡೆಯಬೇಕು. ದೇವಸ್ಥಾನದಲ್ಲಿ ಶೂಟಿಂಗ್ ಮಾಡುವಾಗ ಅನುಮತಿ ಪಡೆಯುವುದು ಕಡ್ಡಾಯ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
























